ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾಡಲಾಗುತ್ತಿರುವ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಸಾರಿಗೆ ಸಿಬ್ಬಂದಿಗಳ ಮೇಲೆ ವಿವಿಧ ರೀತಿಯ ಕ್ರಮ ಜಾರಿ ಮಾಡಿ ಹೋರಾಟ ಹತ್ತಿಕ್ಕುವ ತುರ್ತು ಪರಿಸ್ಥಿತಿ ಹೇರುವುದನ್ನು ಬಿಟ್ಟು ಕೂಡಲೇ ಸಾರಿಗೆ ಸಿಬ್ಬಂದಿ ಜೊತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಜೆ.ಡಿ.ಎಸ್.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್.ಕೋನರಡ್ಡಿ ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸಾರಿಗೆ ಸಿಬ್ಬಂದಿಗಳು ಕಳೆದ 11 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಪರಿಣಾಮ ಗಂಡ ಹೆಂಡರ ಜಗಳದ ನಡುವೆ ಕೂಸು ಬಡವಾಯಿತು ಎಂಬಂತೆ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ. ಇನ್ನೂ ಇದೇ ರೀತಿ ಸಿಬ್ಬಂದಿ ಹಾಗೂ ಸರ್ಕಾರ ನಡುವೆ ಹೋರಾಟ ಮುಂದುವರೆದರೇ, ಸಾರಿಗೆ ಸಂಸ್ತೆಯ ಗತಿಯೇನು? ಕೂಡಲೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಾರಿಗೆ ಸಿಬ್ಬಂದಿಗಳನ್ನು ಕರೆದು ಮೂರು ದಿನಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಪಕ್ಷದಿಂದ ಸಾರಿಗೆ ಸಿಬ್ಬಂದಿ ಬೆಂಬಲಿಸಿ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುರಾಜ ಹುಣಸಿಮರದ,
ವಿನಾಯಕ ಗಾದಿಒಡ್ಡರ, ಸಾಧಿಕ್ ಸೇರಿದಂತೆ ಮುಂತಾದವರು ಇದ್ದರು.
ಖಾಸಗೀಕರಣ ಮಾಡುವ ಹುನ್ನಾರ…!
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಮುಂದುವರೆದಿದೆ. ಇದೇ ರೀತಿ ಮುಂದುವರೆಯುತ್ತಾ ಹೋದರೆ ಸಾರಿಗೆ ಸಂಸ್ಥೆಗೆ ಬಹುದೊಡ್ಡ ಹಾನಿಯಾಗಲಿದೆ. ಅಲ್ಲದೇ ಕೆಂದ್ರ ಸರ್ಕಾರ ಇಲ್ಲಸಲ್ಲದ ನೆಪಹೇಳಿ ಸರ್ಕಾರ ಖಾಸಗೀಕರಣ ಮಾಡಲು ಹೊರಟಂತಿದೆ. ಕೂಡಲೇ ಸರ್ಕಾರ ಕೋವಿಡ್ – 19 ಹಾಗೂ ಚುನಾವಣೆ ನೀತಿ ಸಂಹಿತೆಯ ಕುಂಟು ನೆಪ ಬಿಟ್ಟು ತಕ್ಷಣ ಸಾರಿಗೆ ಸಿಬ್ಬಂದಿ ಸಮಸ್ಯೆ ಪರಿಹರಿಸಬೇಕು.
– ಎನ್.ಹೆಚ್.ಕೋನರೆಡ್ಡಿ