9 ರಿಂದ 12 ನೇ ತರಗತಿಗಳ ಪುನರಾರಂಭ

Spread the love

ಹುಬ್ಬಳ್ಳಿ: ಸುಮಾರು 18 ತಿಂಗಳ ನಂತರ ಶಾಲೆ,ಕಾಲೇಜುಗಳು ಪುನರಾರಂಭವಾಗುತ್ತಿವೆ. ವಿದ್ಯಾರ್ಥಿಗಳು ಶುಚಿತ್ವ ಮತ್ತು ಆರೋಗ್ಯ ಸುರಕ್ಷತೆಯ ಕ್ರಮಗಳೊಂದಿಗೆ ಕಲಿಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕರೆ ನೀಡಿದರು.
ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಂದು 9 ರಿಂದ 12 ನೇ ತರಗತಿಗಳ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಮಾಸ್ಕ್ ವಿತರಿಸಿ, ಹೂವು ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ವರ್ಷದ ನಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿದೆ.ಆದರೆ ವಿದ್ಯಾರ್ಥಿಗಳು ಕೋವಿಡ್ ಸುರಕ್ಷತಾ ನಿಟ್ಟಿನಲ್ಲಿ ಮೈ ಮರೆಯಬಾರದು . ಪದೇ ಪದೇ ಸೋಪಿನಿಂದ ಕೈ ತೊಳೆಯುವ,ಸ್ಯಾನಿಟೈಸರ್ ಬಳಸುವ ,ಮಾಸ್ಕ್ ಧರಿಸುವದನ್ನು ಕಡ್ಡಾಯವಾಗಿ ಪಾಲಿಸಬೇಕು.ಕಣ್ಣು,ಮೂಗು,ಬಾಯಿ ಮುಟ್ಟಿಕೊಳ್ಳಬಾರದು.ಶಾಲೆಗಳ,ತರಗತಿಗಳ ಪುನರಾರಂಭ ಸಂತೋಷದಾಯಕವಾಗಿದೆ.ಭವಿಷ್ಯ ಉಜ್ವಲವಾಗಿಸಿಕೊಳ್ಳಲು ದೊಡ್ಡ ಗುರಿ ಹೊಂದಿರಬೇಕು.ಆಸಕ್ತಿದಾಯಕ ವಿಷಯಗಳನ್ನು ಗುರುತಿಸಿಕೊಂಡು ಆ ರಂಗದಲ್ಲಿಯೇ ಉತ್ತಮ ಸಾಧನೆ ಮಾಡಲು ಗಮನ ಕೇಂದ್ರೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸನ್ಮಾನ ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಭೌತಶಾಸ್ತ್ರ,ರಸಾಯನಶಾಸ್ತ್ರ ,ಜೀವಶಾಸ್ತ್ರ ಪ್ರಯೋಗಾಲಯಗಳು,ಗ್ರಂಥಾಲಯ ಅಭಿವೃದ್ಧಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಠೇವಣಿ ಸೇರಿ ಒಟ್ಟು 5 ಲಕ್ಷ ರೂ.ಕಾಣಿಕೆ ನೀಡಿದ ಗಾಮನಗಟ್ಟಿಯ ವಿರೇಶಶಾಸ್ತ್ರಿ ಶಾಸ್ತ್ರಿಮಠ, ಅನ್ನಪೂರ್ಣ ಶಾಸ್ತ್ರಿಮಠ ದಂಪತಿಗಳಿಗೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸನ್ಮಾನಿಸಿದರು.
ಜಿಲ್ಲೆಯ 108 ಸರ್ಕಾರಿ ,146 ಅನುದಾನಿತ ಹಾಗೂ 162 ಅನುದಾನರಹಿತ ಸೇರಿ ಒಟ್ಟು 416 ಪ್ರೌಢಶಾಲೆಗಳ 9 ನೇ ತರಗತಿಯ 30,805 ಹಾಗೂ 10 ನೇ ತರಗತಿಯ 33,148 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. 27 ಸರ್ಕಾರಿ,39 ಅನುದಾನಿತ ಹಾಗೂ 110 ಅನುದಾನರಹಿತ ಸೇರಿ 176 ಪದವಿಪೂರ್ವ ಕಾಲೇಜುಗಳು ಪುನರಾರಂಭವಾಗಿವೆ.
ವಿದ್ಯಾರ್ಥಿಗಳ ಹರ್ಷ
ಕೆಪಿಎಸ್ ಶಾಲೆಯ ಹತ್ತನೇ ತರಗತಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿ ಹನುಮಂತಪ್ಪ ಮಾತನಾಡಿ, ಅಂಧನಾಗಿರುವ ನನಗೆ ಆನ್‌ಲೈನ್ ತರಗತಿಗಳಿಂದ ಅಭ್ಯಾಸಕ್ಕೆ ಹೆಚ್ಚು ಸಹಾಯವಾಗುತ್ತಿರಲಿಲ್ಲ.ಇದೀಗ ಭೌತಿಕವಾಗಿ ತರಗತಿಗಳು ಪುನರಾರಂಭವಾಗಿರುವುದು ಸಂತಸ ತಂದಿದೆ.ನವನಗರದ ಶಾಲೆ ಉತ್ತಮ ಶಿಕ್ಷಕರು ,ಕಲಿಕಾ ವಾತಾವರಣ ಹೊಂದಿದೆ ಎಂದರು.
ಹತ್ತನೇ ತರಗತಿ ವಿದ್ಯಾರ್ಥಿನಿ ಗೌರಮ್ಮ ಕಟ್ಟೇಕಾರ್ ಮಾತನಾಡಿ, ತರಗತಿಗಳ ಪುನರಾರಂಭ ಹರ್ಷ ಉಂಟುಮಾಡಿದೆ.ಪರಸ್ಪರ ಸಹಪಾಠಿಗಳು,ಶಿಕ್ಷಕರನ್ನು ಮುಖಾಮುಖಿಯಾಗುತ್ತಿರುವುದು ಹೊಸ ಉತ್ಸಾಹ ತಂದಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಕೆಪಿಎಸ್ ಪ್ರಾಚಾರ್ಯ ಅಶೋಕ ಸವಣೂರ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

error: Content is protected !!