ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಮಾರ್ಗಂ’ ಶೈಕ್ಷಣಿಕ ಮಾರ್ಗದರ್ಶನ ಶಿಬಿರ
ಹುಬ್ಬಳ್ಳಿ: ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಹಂತವಾಗಿದೆ. ಶಿಕ್ಷಣ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ. ಅದು ಬಲವಾಗಿದ್ದರೆ ಮಾತ್ರ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಮೋಹನರಾಜ ಇಲ್ಲೂರ ಹೇಳಿದರು.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕೆಎಲ್ಇ ಕಾಲೇಜಿನಲ್ಲಿ ಎಸ್.ಜೆ.ಎಫ್.ಎಸ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ/ನಿಯರ ಸಂಘದ ಆಶ್ರಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಮಾರ್ಗಂ’ ಶೈಕ್ಷಣಿಕ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಓದಿದರೆ ಏನು ಉದ್ಯೋಗ ಪಡೆಯಬಹುದು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಆ ದಾರಿಯಲ್ಲಿ ಅಧ್ಯಯನ ಮುಂದುವರಿಸಬೇಕು. ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಚಿನ್ನದ ಜೀವನ ಎಂದು ತಿಳಿದಿರುತ್ತಾರೆ. ಆದರೆ ಚಿನ್ನದಂಥ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬುದ್ಧಿವಂತಿಕೆಯನ್ನು ದೇವರು ಎಲ್ಲರಿಗೂ ನೀಡಿರುತ್ತಾನೆ. ಅದನ್ನು ಬಳಸಿಕೊಳ್ಳಬೇಕಷ್ಟೆ. ಬುದ್ಧಿವಂತಿಕೆಯಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ನಾವು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ವೀರೇಶಕುಮಾರ ವಿಜಾಪುರ ಮಾತನಾಡಿ, ಎಸ್.ಜೆ.ಎಫ್.ಎಸ್ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ/ನಿಯರ ಸಂಘ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯದ ಒಳಿತಿಗಾಗಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಶಿಬಿರದಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರು ಪಾಲ್ಗೊಂಡು ಶೈಕ್ಷಣಿಕ ಮಾರ್ಗದರ್ಶನ ಶಿಬಿರದ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಮಾಲತೇಶ ನೇಕಾರ, ಶಿಕ್ಷಕ ಪ್ರಕಾಶ ಭತ್ತಿ, ಶಿವನಗೌಡ ಕುರಟ್ಟಿ, ಮಹಾಂತೇಶ ಯರೇಸೀಮಿ, ಸಂಜೀವ್ ಕುಂಬಿ, ಅಲ್ತಾಫ್ ಗೋಕಾವಿ, ಜಗದೀಶ್ ಹಿರೇಮಠ ಹಾಗೂ ಮೊದಲಾದವರು ಪಾಲ್ಗೊಂಡಿದ್ದರು.