*ದಶಕದಿಂದ ಪ್ರಗತಿಯತ್ತ ಧಾರವಾಡ ಜಿಲ್ಲೆ: ಜೋಶಿ*
ಹುಬ್ಬಳ್ಳಿ: ಕಳೆದೊಂದು ದಶಕದಲ್ಲಿ ಧಾರವಾಡ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ತೋಳನಕೆರೆ ಪಾರ್ಕ್‌ನಲ್ಲಿ ಶನಿವಾರ ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ, ಕಿಮ್ಸ್ ಕಟ್ಟಡ, ವಿಮಾನ ನಿಲ್ದಾಣ, ಮಲಪ್ರಭಾ ಕುಡಿಯುವ ನೀರು ಪೂರೈಕೆ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಧಾರವಾಡ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
*ಮಹದಾಯಿ ನನ್ನ ಗುರಿ:* ಇನ್ನು ಈ ಭಾಗದಲ್ಲಿ ಮಹದಾಯಿ ಅನುಷ್ಠಾನಕ್ಕೆ ತರುವುದು ನನ್ನ ಗುರಿ. ಮತ್ತು ಜವಾಬ್ದಾರಿಯಾಗಿದೆ. ಇದರಲ್ಲಿ ಕಾಂಗ್ರೆಸ್ ನವರಂತೆ ರಾಜಕಾರಣ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಧಾರವಾಡ ಕ್ಷೇತ್ರ ಕಳೆದೊಂದು ದಶಕದಿಂದ ಅಭಿವೃದ್ಧಿಯ ವೇಗ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದ ಸಚಿವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಭಿವೃದ್ಧಿ ಚುರುಕುಗೊಳಿಸಿ ದೇಶವನ್ನು ಜಾಗತಿಕವಾಗಿ ಗುರುತಿಸಿದ್ದಾರೆ. ದೇಶಕ್ಕಾಗಿ ಮೋದಿ ಅವರ ಕೈ ಬಲಪಡಿಸಲು ಮತ್ತೆ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ವೀಣಾ ಬರದ್ವಾಡ, ಚನ್ನು ಹೊಸಮನಿ ಹಾಗೂ ಕಾರ್ಯಕರ್ತರು ಇದ್ದರು.