ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಬೆಳ್ಳಂಬೆಳಗ್ಗೆ ಭಾರಿ ಸದ್ದಿನೊಂದಿಗೆ ಭೂಕಂಪನವಾಗಿದೆ. ಬೆಳಗ್ಗೆ 6.22ರ ಸಮಯದಲ್ಲಿ 3 ರಿಂದ 4 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ 5-40ರ ವೇಳೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಭೂಕಂಪನವಾಗಿದೆ.
ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಈ ನಡುವೆ ಭೂಕಂಪನವಾಗಿದೆ. ವಿಜಯಪುರದ ನಗರದ ರೇಲ್ವೆ ನಿಲ್ದಾಣ ಪ್ರದೇಶ, ಗೋಳಗುಮ್ಮಟ ಪ್ರದೇಶ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಫಾರೇಖನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ.ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಶಬ್ದದೊಂದಿಗೆ ಭೂಕಂಪನ ಆಗಿರಲಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ತಿಂಗಳಿಂದ ಜಿಲ್ಲೆಯಲ್ಲಿ ಭೂಕಂಪನದ ಅನುಭವ ಆಗುತ್ತಿದ್ದು, ತಜ್ಞರ ತಂಡವೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಮಹಾರಾಷ್ಟ್ರದಲ್ಲೂ ಕಂಪನ: ಪಕ್ಕದ ಮಹಾರಾಷ್ಟ್ರದಲ್ಲೂ ಭೂಮಿ ಕಂಪಿಸಿದೆ. ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಭಾಗದಲ್ಲೂ ಸುಮಾರು 10-15 ಸೆಕೆಂಡ್ಗಳ ಕಾಲ ಕಂಪನ ಉಂಟಾಗಿದೆ. ಜತ್ತ ತಾಲೂಕಿನ ಮರಬಗಿ ಗ್ರಾಮದಲ್ಲಿ ಭೂಕಂಪನ ಆದಾಗ ದನಗಳ ಕೊಟ್ಟಿಗೆಯ ಪತ್ರಾಸಗಳು ಅಲುಗಾಡಿದ್ದು, ರಾಸುಗಳು ಬೆದರಿವೆ. ತೋಟದ ಮನೆಯಲ್ಲಿದ್ದ ನಾವು ಹೊರಗೆ ಓಡಿ ಬಂದೆವು ಎಂದು ಮರಬಗಿ ನಿವಾಸಿ ಅಣ್ಣಾರಾಯ ಗದ್ಯಾಳ ಹೇಳಿದ್ದಾರೆ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …