ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಬದುಕಿದೆಯೇ ಅಥವಾ ಸತ್ತಿದೆಯೇ? ಇತ್ತೀಚೆಗೆ ಶ್ರಮಿಕ ವರ್ಗಕ್ಕೆ ಘೋಷಿಸಿರುವ ಪರಿಹಾರ ಪ್ಯಾಕೇಜ್ ಕೇವಲ ಶೋಕಿಗಾಗಿ. ಇದು ರಿಯಲ್ ಅಲ್ಲಾ ರೀಲ್ ಪ್ಯಾಕೇಜ್ ಆಗಿದ್ದು
ಇದರಿಂದ ನಿಜಕ್ಕೂ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೋಟಗಾರಿಕೆ ಬೆಳೆಗೆ ಒಂದು ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಂದರೆ, ಒಂದು ಗುಂಟೆಗೆ ₹100, ಕಾಲು ಎಕರೆಗೆ ₹1 ಸಾವಿರ ಹಾಗೂ ಒಂದು ಎಕರೆಗೆ ₹4 ಸಾವಿರ ಮಾತ್ರ. ಇದನ್ನು ಯಾರಾದರೂ ಪರಿಹಾರ ಎನ್ನುತ್ತಾರೆಯೇ? ಇದರಿಂದ ಸಣ್ಣ ರೈತರಿಗೆ ಎಷ್ಟು ಅನುಕೂಲವಾಗುತ್ತದೆ? ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇದೆಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೆಕ್ಕ ಕೊಡಲಿ: ‘ಕಳೆದ ಸಲ ತೋಟಗಾರಿಕೆ ಬೆಳೆಗಳಿಗೆ ₹137 ಕೋಟಿ ಪರಿಹಾರ ಘೋಷಿಸಿ, ₹58 ಕೋಟಿ ಕೊಟ್ಟಿದ್ದರು. ಹೂವು ಬೆಳೆಗಾರರಿಗೆ ಘೋಷಿಸಿದ ₹31 ಕೋಟಿ ಪೈಕಿ, ಫಲಾನುಭವಿಗಳನ್ನು ತಲುಪಿದ್ದು ಕೇವಲ ₹15 ಕೋಟಿ. ಆಟೊ, ಟ್ಯಾಕ್ಸಿ, ಬಾಡಿಗೆ ವಾಹನಗಳು ಸೇರಿದಂತೆ ರಾಜ್ಯದಲ್ಲಿ ಸುಮಾರು 25 ಲಕ್ಷ ಚಾಲಕರಿದ್ದಾರೆ. ಸರ್ಕಾರದ ದೃಷ್ಟಿಯಲ್ಲಿ ಅವರ ಸಂಖ್ಯೆ ಕೇವಲ 7.25 ಲಕ್ಷ. ಇಷ್ಟು ಮಂದಿ ಪೈಕಿ, ಕಳೆದ ಸಲ ಪರಿಹಾರದ ಸಿಕ್ಕಿದ್ದು 2.15 ಲಕ್ಷ ಚಾಲಕರಿಗಷ್ಟೆ. 1.25 ಲಕ್ಷ ನೇಕಾರರ ಪೈಕಿ ಎಷ್ಟು ಮಂದಿಗೆ ₹2 ಸಾವಿರ ಪರಿಹಾರ ಸಿಕ್ಕಿದೆ ಎಂದು ಸರ್ಕಾರ ಲೆಕ್ಕ ಕೊಡಲಿ?’ ಎಂದು ಸವಾಲು ಹಾಕಿದರು.
‘ಪರಿಹಾರ ಪ್ಯಾಕೇಜ್ ಕೊಡುವುದಕ್ಕಾಗಿ ಸರ್ಕಾರ ನನ್ನನ್ನು ಹದಿನೈದು ದಿನ ನೇಮಿಸಿಕೊಳ್ಳಲಿ. ಪಾರದರ್ಶಕವಾಗಿ ಜನರಿಗೆ ಹೇಗೆ ಪರಿಹಾರ ಹಂಚಬೇಕು ಎಂಬುದನ್ನು ತೋರಿಸುತ್ತೇನೆ. ಒಂದು ರೂಪಾಯಿ ವ್ಯತ್ಯಾಸವಾದರೂ ನನ್ನನ್ನು ಜೈಲಿಗೆ ಹಾಕಿ’ ಎಂದರು.
‘ಕೋವಿಡ್‌ಗೆ ಜಾತಿ ಮತ್ತು ಧರ್ಮವಿಲ್ಲ. ಮಾನವೀಯತೆ ದೃಷ್ಟಿಯಿಂದ ಕೊರೊನಾ ತಡೆಯಲು ಎಲ್ಲರೂ ಸಹಕರಿಸಬೇಕು. ಮೊದಲಿಗೆ ಎಲ್ಲರಿಗೂ ಲಸಿಕೆ ಸಿಗಬೇಕು. ಅದಕ್ಕಾಗಿ ಪಕ್ಷದಿಂದ ₹100 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರೆ, ಆ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅನುಮತಿ ನೀಡಲು ಇವರಿಗೇನು ತೊಂದರೆ?’ ಎಂದು ಪ್ರಶ್ನಿಸಿದರು.
‘ಸತ್ತವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರವನ್ನೂ ಮಾಡಲಿಲ್ಲ. ಎರಡ್ಮೂರು ದಿನ ಸ್ಮಶಾನಗಳ ಎದುರು ಆಂಬುಲೆನ್ಸ್‌ನಲ್ಲಿ ಶವ ಇಟ್ಟುಕೊಂಡು ಕಾಯುವ ಸ್ಥಿತಿ ತಂದರು. ಮೃತರ ಮುಖ ನೋಡಲು ಕುಟುಂಬದವರಿಗೂ ಅವಕಾಶ ನೀಡಲಿಲ್ಲ. ನಾನು ಹೇಳಿದ ಮೇಲೆಯೇ ಸಚಿವ ಆರ್. ಅಶೋಕ ಬೆಂಗಳೂರಿನ ಹೊರವಲಯದಲ್ಲಿ ಸ್ಮಶಾನ ನಿರ್ಮಾಣಕ್ಕೆ ಮುಂದಾದರು’ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಹಾಗೂ ಸ್ಥಳೀಯ ಮುಖಂಡರು ಇದ್ದರು.
Check Also
ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ
Spread the love ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …