ನವದೆಹಲಿ: ಕೊರೊನಾ ಮಾಹಾಮಾರಿಯಿಂದ 2020 ಹಾಗೂ 2021ರಲ್ಲಿ ಅನೇಕ ಪತ್ರಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಇದೀಗ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ 67 ಪತ್ರಕರ್ತರು ಸಾವನ್ನಪ್ಪಿದ್ದು, ಇದೀಗ ಅವರ ಕುಟುಂಬಕ್ಕೆ ಪತ್ರಕರ್ತ ಕಲ್ಯಾಣ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ನೀಡಲು ಮುಂದಾಗಿದೆ. ಇದಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅನುಮೋದನೆ ನೀಡಿದೆ.
ಕೊರೊನಾದಿಂದಾಗಿ 2020ರಲ್ಲಿ 41 ಪತ್ರಕರ್ತರು ಹಾಗೂ ಈ ವರ್ಷ 26 ಪತ್ರಕರ್ತರು ಸಾವನ್ನಪ್ಪಿದ್ದು, ಅವರ ಕುಟುಂಬಗಳಿಗೆ ಇದೀಗ ಪರಿಹಾರ ಸಿಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಜೆಡಬ್ಲ್ಯುಎಸ್ ಅಡಿ ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳ ತ್ವರಿತ ವಿಲೇವಾರಿ ಮಾಡಲು ವಾರಕ್ಕೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಇನ್ನು ಬೇರೆ ಕಾರಣಗಳಿಂದ ಸಾವನ್ನಪ್ಪಿರುವ 11 ಪತ್ರಕರ್ತರ ಕುಟುಂಬಗಳ ಅರ್ಜಿ ಸಹ ಮಾನ್ಯ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
![](https://karnatakajunction.com/wp-content/uploads/2022/09/IMG-20210528-WA0000-660x330.jpg)