ಬೆಂಗಳೂರು: ರಾಜ್ಯದ ನಗರ ಪ್ರದೇಶಗಳ ನಂತರ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಹೋಂ ಐಸೊಲೇಷನ್ ನಿರಾಕರಿಸಲು ನಿರ್ಧರಿಸಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯೂ ಸೋಂಕು ನಿಯಂತ್ರಣ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ.
ರಾಜ್ಯದಲ್ಲಿ ಲಾಕ್ಡೌನ್ ನಡುವೆಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ಸೋಂಕಿನ ಸಂಖ್ಯೆ ಅಲ್ಪ ಇಳಿಕೆ ಕಂಡಿದ್ದರೂ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ನಿಧಾನಕ್ಕೆ ಹೆಚ್ಚಾಗುತ್ತಿದೆ ಎನ್ನುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.ಹಳ್ಳಿಗಳಲ್ಲಿ ಹೋಂ ಸೋಂಕಿತರಿಗೆ ಐಸೊಲೇಷನ್ ಇಲ್ಲ!ಹಳ್ಳಿಗಳಲ್ಲಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಹಳ್ಳಿಗಳಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದೆ. ಇಷ್ಟು ದಿನ ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಹೋಂ ಐಸೊಲೇಷನ್ನಲ್ಲಿ ಇರಲು ಅನುಮತಿ ನೀಡಲಾಗುತ್ತಿತ್ತು. ಆದರೆ ಹೋಂ ಐಸೊಲೇಷನ್ ನಿಯಮ ಸರಿಯಾಗಿ ಪಾಲನೆ ಮಾಡದ ಕಾರಣದಿಂದಾಗಿಯೇ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಹಳ್ಳಿಗಳ ಮನೆಗಳಲ್ಲಿ ಪ್ರತ್ಯೇಕವಾಗಿರುವ ವ್ಯವಸ್ಥೆ ಇರುವುದು ವಿರಳ. ಹಾಗಾಗಿ ಸೋಂಕಿತರು ಹೋಂ ಐಸೋಲೇಷನ್ ಇದ್ದರೂ ಸೋಂಕು ಮನೆಯವರ ಮೂಲಕ ಇತರರಿಗೆ ಹರಡುತ್ತಿದೆ. ಇದನ್ನು ತಡೆಯಲು ಸರ್ಕಾರ ಇದೀಗ ಹಳ್ಳಿಗಳಲ್ಲಿ ಹೋಂ ಐಸೊಲೇಷನ್ ಪದ್ಧತಿ ಕೈಬಿಟ್ಟು ಕೋವಿಡ್ ಕೇರ್ ಸೆಂಟರ್ಗಳಿಗೆ ಸೋಂಕಿತರನ್ನು ದಾಖಲಿಸಬೇಕು ಎನ್ನುವ ನಿರ್ಧಾರ ಕೈಗೊಂಡಿದೆ.ಪಿಡಿಒಗಳಿಗೆ ಹೆಚ್ಚಿನ ಜವಾಬ್ದಾರಿ:ಹಳ್ಳಿಗಳಲ್ಲಿ ಮದುವೆ ಸಮಾರಂಭಗಳನ್ನು ಕೋವಿಡ್ ನಿಯಮ ಉಲ್ಲಂಘಿಸಿ ಮಾಡಲಾಗುತ್ತಿದೆ. 400-500ಕ್ಕೂ ಹೆಚ್ಚಿನ ಜನ ಸೇರುತ್ತಿದ್ದಾರೆ. ಇದು ಕೂಡ ಕೋವಿಡ್ ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಮದುವೆಗೆ 40 ಜನರ ಮಿತಿ ನಿಗದಿಪಡಿಸಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮಮಟ್ಟದ ಆಡಳಿತಕ್ಕೆ ಸೂಚನೆ ನೀಡಿ, ಪಿಡಿಒಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹಳ್ಳಿಗಳಲ್ಲಿ ಮದುವೆ ಇತ್ಯಾದಿ ಶುಭ ಕಾರ್ಯಗಳ ಹೆಸರಿನಲ್ಲಿ ಜನ ಸೇರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಿಡಿಒಗಳಿಗೆ ನೀಡಲಾಗುತ್ತಿದೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಸರ್ಕಾರ ವಿಶೇಷ ಗಮನ ಹರಿಸಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೋವಿಡ್ ಸೋಂಕು ನಿಯಂತ್ರಣದಲ್ಲಿ ತೊಡಗಿಕೊಳ್ಳಲಿದೆ. ಇದರ ಆರಂಭಿಕ ಭಾಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಮೇ 24 ಮತ್ತು 25ರಂದು ಎರಡು ದಿನ ನಡೆಯುವ ಸಂವಾದದಲ್ಲಿ ಹಳ್ಳಿಗಳಲ್ಲಿ ಸೋಂಕು ನಿಯಂತ್ರಿಸುವ ಹೊಣೆಗಾರಿಕೆ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗುತ್ತದೆ.ನಗರ ಪ್ರದೇಶದಿಂದ ಬರುವವರಿಗೆ ಕೋವಿಡ್ ಪರೀಕ್ಷೆ!ಗ್ರಾಮಕ್ಕೆ ಹೊರ ಭಾಗದಿಂದ ಬರುವ ಜನರಿಗೆ ವಿಶೇಷವಾಗಿ ನಗರ ಪ್ರದೇಶದದಿಂದ ಬರುವವರಿಗೆ ಕೋವಿಡ್ ಪರೀಕ್ಷೆ ನಡೆಸಬೇಕು. ಯಾರಿಗೆ ಸೋಂಕು ದೃಢಪಡಲಿದೆಯೋ ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು, ಹೋಂ ಐಸೋಲೇಷನ್ ಬದಲು ಕೋವಿಡ್ ಕೇರ್ ಸೆಂಟರ್ಗೆ ಹೋಗುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಬೇಕು ಎನ್ನುವ ಕುರಿತು ಅಗತ್ಯ ಸಲಹೆ ಸೂಚನೆ ನೀಡಲಾಗುತ್ತದೆ.ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಲು ನಿರ್ಧಾರಚಿಕಿತ್ಸೆಗೂ ಹೆಚ್ಚಿನ ಆದ್ಯತೆ ಮುಂಜಾಗ್ರತಾ ಕ್ರಮಕ್ಕೆ ನೀಡಬೇಕು. ಹಾಗಾಗಿ ಹಳ್ಳಿಗಳಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಸ್ವಚ್ಛತೆ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಗುಂಪು ಸೇರದಂತೆ ನೋಡಿಕೊಳ್ಳುವುದು, ಅನಗತ್ಯವಾಗಿ ಜನರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುವ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …