ಬೆಳಗಾವಿ; ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಲೇಖಕ,ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ದೇಶಪಾಂಡೆ (69) ಬುಧವಾರ ಮಧ್ಯಾನ್ಹ
ನಿಧನರಾಗಿದ್ದಾರೆ.
ಕೊರೋನಾ ಸೋಂಕಿನಿಂದಾಗಿ
ಅಸ್ವಸ್ಥರಾಗಿದ್ದ ಅವರನ್ನು ಹುಕ್ಕೇರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು.ಇಂದು
ಬೆಳಿಗ್ಯೆ ಆಕ್ಸಿಜೆನ್ ಮಟ್ಟ ತೀವ್ರವಾಗಿ
ಕುಸಿದಿದ್ದರಿಂದ ಅವರು ಕೊನೆಯುಸಿರೆಳೆದರು ಹುಕ್ಕೇರಿ ತಾಲೂಕಾ ಕ.ಸಾ.ಪ.ಘಟಕದ ಅಧ್ಯಕ್ಷರಾಗಿದ್ದ ಅವರು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದರು. ಕಳೆದ 40 ವರ್ಷಗಳಿಂದ ನಾಡಿನ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯ ನಿರ್ವಹಿಸಿದ ಅವರು ಕಾಂಗ್ರೆಸ್ ಸೇವಾದಳದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಅವರು ನೇರ ನುಡಿಗೆ ಹೆಸರಾಗಿದ್ದರು.
ಕನ್ನಡ ನಾಡು ನುಡಿ ಹಾಗೂ ಗಡಿಯ ಸಂಬಂಧದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ತಮ್ಮ ಹುಕ್ಕೇರಿ ತಾಲೂಕಿನಲ್ಲಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕರ್ನಾಟಕದ ನೂರಾರು ಸಾಹಿತಿಗಳು,ಕಲಾವಿದರು,ರಾಜಕೀಯ ಮುಖಂಡರ ಜೊತೆಗೆ ಸತತ ಸಂಪರ್ಕ
ಹೊಂದಿದ್ದ ದೇಶಪಾಂಡೆ ಅವರ ನಿಧನವು ಬೆಳಗಾವಿ ಜಿಲ್ಲೆಯ ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ರಂಗಕ್ಕೆ ಆಘಾತ ಉಂಟು ಮಾಡಿದೆ.
