ಬೆಳಗಾವಿ: ಲಾಕ್ಡೌನ್ ಸಮಯದಲ್ಲಿ ಅನಗತ್ಯವಾಗಿ ಓಡಾಡುವ ಜನರಿಗೆ ನಕಲಿ ಐಡಿ ಕಾರ್ಡ್ ತಯಾರಿಸಿ ಕೊಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಡಿಸಿಪಿ ವಿಕ್ರಮ ಆಮಟೆ ನೇತೃತ್ವದ ಖಡೇಬಜಾರ್ ಪೊಲೀಸರ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಕಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮಾಲೀಕ ವಿಶ್ವನಾಥ ಮುಚ್ಚಂಡಿ (35) ಹಾಗೂ ಭಾತಖಾಂಡೆ ಗಲ್ಲಿಯ ರೋಹಿತ ಸುನೀಲ ಕುಟ್ರೆ (23) ಬಂಧಿತ ಆರೋಪಿಗಳು. ಈ ಇಬ್ಬರು ಲಾಕ್ಡೌನ್ ಅವಧಿಯಲ್ಲಿ ಓಡಾಡುವ ಜನರಿಗೆ ವಿವಿಧ ಇಲಾಖೆಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ಗಳನ್ನು ಪ್ರಿಂಟ್ ಮಾಡಿ ಕೊಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೈಗೆ ಕೋಳ ತೊಡಿಸಿದ್ದಾರೆ.
ನಕಲಿ ಐಡಿ ಕಾರ್ಡ್ಗಳು
ಬಂಧಿತರಿಂದ ಸಹಕಾರ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಹೆಸರಿನಲ್ಲಿದ್ದ ನಕಲಿ ಐಡಿಗಳು ಮತ್ತು ಅದಕ್ಕೆ ಬಳಸಲಾಗುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
