ರಾಜ್ಯದಲ್ಲಿಯೇ ಯಶಸ್ವಿ ಚಿಕಿತ್ಸೆ ಹೆಗ್ಗಳಿಕೆಗೆ ಪಾತ್ರವಾದ ಕಿಮ್ಸ್ ನಲ್ಲಿ ಮತ್ತೇ ಪ್ಲಾಸ್ಮಾ ಥೆರಪಿ ಆರಂಭ…!

Spread the love

ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ಹೆಸರು ಗಳಿಸಿದ್ದ ಕಿಮ್ಸ್ ಆಸ್ಪತ್ರೆ ಈಗ ಮತ್ತೇ ಕೊರೋನಾ ಎರಡನೇ ಅಲೆಯನ್ನು ಕಟ್ಟಿ ಹಾಕಲು ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಿದೆ.
ಕೋವಿಡ್‌ ಇಳಿಮುಖವಾಗಿದ್ದ ಪರಿಣಾಮ ಕಿಮ್ಸ್‌ನಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಮತ್ತೆ ಆರಂಭವಾಗಿದೆ. 2ನೇ ಅಲೆಯಲ್ಲಿ ಕೊರೋನಾ ತಗುಲಿದ ಮೂವರಿಗೆ ಈಗಾಗಲೇ ಥೆರಪಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಕೊರೋನಾ ಮೊದಲ ಅಲೆ ವೇಳೆ ರಾಜ್ಯದಲ್ಲಿಯೇ ಮೊದಲ ಬಾರಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಪಡೆದಿದ್ದು,ಇಲ್ಲಿನ ಕಿಮ್ಸ್‌.
ಐಸಿಎಂಆರ್‌ ಒಪ್ಪಿಗೆ ಪಡೆದು ಮೇ ತಿಂಗಳಲ್ಲಿ ಸೋಂಕಿಂದ ಗುಣಮುಖನಾಗಿದ್ದ 64 ವರ್ಷದ ಮಸಣ ಕಾಯುತ್ತಿದ್ದ ವೃದ್ಧನ(ಪಿ- 363) ಮನವೊಲಿಸಿ ಪ್ಲಾಸ್ಮಾ ಪಡೆದು 65 ವರ್ಷದ ಸೋಂಕಿತನಿಗೆ ಥೆರಪಿ ನೆರವೇರಿಸಲಾಗಿತ್ತು. ಕಳೆದ ಡಿಸೆಂಬರ್‌ ವೇಳೆಗೆ ಬರೋಬ್ಬರಿ 108 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಒದಗಿಸಲಾಗಿತ್ತು. ಅದಾದ ಬಳಿಕ ಕೊರೋನಾ ಗ್ರಾಫ್‌ ಇಳಿದ ಹಿನ್ನೆಲೆ ಫೆಬ್ರವರಿ ವೇಳೆಗೆ ಪ್ಲಾಸ್ಮಾ ಥೆರಪಿ ಬಹುತೇಕ ನಿಂತಿತ್ತು.
ಆದರೂ ಮುಂಜಾಗೃತ ಕ್ರಮವಾಗಿ ತಲಾ 200 ಎಂಎಲ್‌ನ 12 ಬಾಟಲ್‌ ಹಾಗೂ ಒಂದು 100 ಎಂಎಲ್‌ ಬಾಟಲ್‌ ಪ್ಲಾಸ್ಮಾ ಸದ್ಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗಿತ್ತು. ಈಚೆಗೆ ಹದಿನೈದು ದಿನಗಳಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗಿದೆ. ಪರಿಣಾಮ ಕಿಮ್ಸ್‌ನಲ್ಲಿ ಕನಿಷ್ಠ 8ಕ್ಕೆ ಇಳಿದಿದ್ದ ರೋಗಿಗಳ ಸಂಖ್ಯೆ 80 ಪ್ಲಸ್‌ ಆಗಿದೆ. ಸಂಗ್ರಹವಿರುವ ಪ್ಲಾಸ್ಮಾ ಬಳಕೆಯಾಗುತ್ತಿದೆ.
ಕೊರೋನಾದಿಂದ ಗುಣಮುಖರಾಗಿ ರೋಗನಿರೋಧಕ ಶಕ್ತಿ ಬೆಳೆದವರು ಮಾತ್ರ ಪ್ಲಾಸ್ಮಾ ದಾನ ಮಾಡಲು ಶಕ್ತರು. ಇಂಥವರಿಂದ 400 ಮಿಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುವುಳ್ಳ ವ್ಯಕ್ತಿಗೆ 200 ಎಂಎಲ್‌ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್‌ ಕೊಡಲಾಗುತ್ತದೆ.


Spread the love

Leave a Reply

error: Content is protected !!