ಹುಬ್ಬಳ್ಳಿ; ಮುಷ್ಕರದ ನಡುವೆಯೂ ಸಂಸ್ಥೆಯ ಕರೆಗೆ ಓಗೊಟ್ಟು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್. ಮುಜುಂದಾರ ಹಾಗೂ ಎಚ್. ರಾಮನಗೌಡರ ಅವರು ಅಭಿನಂದನೆ ಸಲ್ಲಿಸಿದರು.
ಹಳೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ‘ಸಿಬ್ಬಂದಿಯ ಕರ್ತವ್ಯ ನಿಷ್ಠೆ ಹಾಗೂ ಬದ್ಧತೆ ಶ್ಲಾಘನೀಯ. ದಿನ ಕಳೆದಂತೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಏರಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರ ಪುನರಾರಂಭಿಸಲು ಸಾಧ್ಯವಾಗಿದೆ. ನಿಮ್ಮ ಕರ್ತವ್ಯಪರತೆ ಇತರ ಸಹೋದ್ಯೋಗಿಗಳಿಗೆ ಪ್ರೇರಣೆಯಾಗಲಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.