ಹುಬ್ಬಳ್ಳಿ: ರಾಜಕಾರಣಿಗಳಿಂದ ದೇಶದ ಜನರು ಬಹಳಷ್ಟು ನಿರೀಕ್ಷೆ ಮಾಡುತ್ತಾರೆ. ಅದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ ಐ ಫೆಸ್ಟ್-3ಡಿ ಲೈವ್ ವೈರ್ ಸರ್ಜಿಕಲ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮದು ವಿಶ್ವದಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ದೇಶ. ಈ ಶ್ರೇಷ್ಠತೆ ಉಳಿಯಬೇಕಾದರೆ ಸಮಾಜದ ಭಾಗಿದಾರಿ ಸಕ್ರಿಯವಾಗಿರಬೇಕು. ಜನರು ದೇಶ ಆಗುಹೋಗುಗಳ ಬಗ್ಗೆ ಕಣ್ಣಿಟ್ಟಿರಬೇಕು (ವಾಚ್‌ಡಾಗ್ಸ್) ಎಂದರು.
ನೇತ್ರ ಸಮಸ್ಯೆ ಬಗ್ಗೆ ಮಾತನಾಡುವಾಗ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಹೆಸರು ಮುಂಚೂಣಿಗೆ ಬರುತ್ತದೆ. ಕಳೆದ 60 ವರ್ಷಗಳಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ 6 ಲಕ್ಷ ಉಚಿತ ನೇತ್ರ ಶಸ್ತ್ರಚಿಕಿತ್ಸೆ ನಡೆಸಿರುವುದು ಶ್ಲಾಘನೀಯವಾದುದು. ಇಂದಿನ ಯುವ ಪೀಳಿಗೆ ಸ್ಕ್ರೀನ್ ಟೈಮ್ (ಮೊಬೈಲ್ ಫೋನ್, ಲ್ಯಾಪಟಾಪ್, ಕಂಪ್ಯೂಟರ್ ಬಳಕೆ)ಗಾಗಿ ನಿತ್ಯ 5ರಿಂದ 7 ತಾಸು ವ್ಯಯಿಸುತ್ತಿರುವುದರಿಂದ ದೃಷ್ಟಿ ದೋಷ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಮಾತನಾಡಿ, ಇದು 28ನೇ ಸಮ್ಮೇಳನವಾಗಿದೆ. ಎಂದಿನಂತೆ ಈ ಬಾರಿಯೂ ಉತ್ತಮ ರೀತಿಯಲ್ಲಿ ಸಮ್ಮೇಳನ ನಡೆದಿದ್ದು, ನೇತ್ರ ವಿಜ್ಞಾನದ ಪ್ರಚಲಿತ ಸಂಗತಿಗಳ ಬಗ್ಗೆ ವಿಚಾರ ವಿನಿಮಯ ಹಾಗೂ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಪ್ರಶಸ್ತಿ ಪ್ರಧಾನ
ಖ್ಯಾತ ನೇತ್ರತಜ್ಞ ಪಶ್ಚಿಮ ಬಂಗಾಳದ ಡಾ. ಸ್ವಪನ ಸಮಾಂತ ಅವರಿಗೆ ಡಾ. ಎಂ.ಎಂ. ಜೋಶಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪುಣೆಯ ರಾಷ್ಟ್ರೀ ನೇತ್ರಶಾಸ್ತ್ರ ಸಂಸ್ಥೆ (ಎನ್‌ಐಒ)ಯ ವೈದ್ಯಕೀಯ ನಿರ್ದೇಶಕ ಡಾ. ಆದಿತ್ಯ ಕೇಲ್ಕರ ಅವರಿಗೆ ಯುವ ಸಾಧಕ, ಚೆನ್ನೈನ ಕೋಡ್ ಐ ಕೇರ್ ವೈದ್ಯಕೀಯ ನಿರ್ದೇಶಕಿ ಡಾ. ಗೀತಾ ಅಯ್ಯರ್ ಅವರಿಗೆ ಉತ್ತಮ ಪ್ರಬಂಧ ಮಂಡನೆಗಾಗಿ ಹಾಗೂ ವಿಜಯನಗರದ ನೇತ್ರ ಶಸ್ತ್ರಚಿಕಿತ್ಸಕ ಡಾ. ಶ್ರೀನಿವಾಸ ದೇಶಪಾಂಡೆ ಅವರಿಗೆ ಅನುಸರಣೀಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ನೇತ್ರ ವಿಜ್ಞಾನ ಸಂಘದ ನಿಯೋಜಿತ ಅಧ್ಯಕ್ಷ ಡಾ. ಕೆ.ವಿ. ಶಿವರಾಮ, ನಿಯೋಜಿತ ಕಾರ್ಯದರ್ಶಿ ಡಾ. ಚಿತ್ರಾ ಜಯದೇವ, ಡಾ. ಶ್ರೀನಿವಾಸ ಜೋಶಿ, ಡಾ.ಗುರುಪ್ರಸಾದ, ಡಾ. ಆರ್. ಕೃಷ್ಣಪ್ರಸಾದ ಇದ್ದರು. ಡಾ. ಶಿಲ್ಪಾ ಮಾಳೇದ ವಂದಿಸಿದರು. ಡಾ. ದೀಪ್ತಿ ಜೋಶಿ ನಿರ್ವಹಿಸಿದರು.
—
