ಹುಬ್ಬಳ್ಳಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಗೆ ನಿಲ್ಲಾಕ್ ಒಂದ್ ಜಾಗ ಇಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ ತೊರೆದು ಬಂದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು. ರಾಹುಲ್ ಗಾಂಧಿ ಸ್ಪರ್ಧಿಸಲು ಒಂದು ಸರಿಯಾದ ಕ್ಷೇತ್ರ ಸಿಗದೇ ತಡಕಾಡಿದರು. ಕೊನೆಗೆ ಹೋಗಿ ಕಮ್ಯುನಿಸ್ಟ್ ಪ್ರಭಾವ ಇರುವ, ವಯನಾಡ್ ಅಲ್ಲಿ ನಿಂತಿದ್ದಾರೆ ಎಂದು ಗೇಲಿ ಮಾಡಿದರು.
ವಯನಾಡ್ ಅಲ್ಲಿ ಮುಸ್ಲಿಂ ಮತಗಳೇ ಹೆಚ್ಚಿದ್ದು, ತಮ್ಮ ಕೈ ಹಿಡಿದರೆ ಮುಸ್ಲಿಂ ಸಮುದಾಯವೇ ಸೈ ಎಂಬ ಲೆಕ್ಕಾಚಾರದಲ್ಲಿ ರಾಹುಲ್ ಗಾಂಧಿ ಅಲ್ಲಿ ಸ್ಪರ್ಧಿಸಿದ್ದಾರೆ. ದೇಶದಲ್ಲಿ ಅಷ್ಟರ ಮಟ್ಟಿಗೆ ಹಿಂದೂ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.
*ಇಂಡಿಯಾ ಅಲ್ಲ ಇಂಡಿ:* ಕಾಂಗ್ರೆಸ್ ಮೈತ್ರಿಕೂಟ ಇಂಡಿಯಾ ಅಲ್ಲ. ಅದರ ನಿಜವಾದ ಹೆಸರು *ಇಂಡಿ*. ಘಟಬಂಧನ್ ರಚಿಸಿಕೊಂಡು ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಗೇ ಕಣಕ್ಕಿಳಿಯಲು ಸರಿಯಾದ ಜಾಗ ಸಿಗಲಿಲ್ಲ ಎಂದು ಜೋಶಿ ಹೇಳಿದರು.
*ದೇಶದ ಸಾರ್ವಭೌಮತ್ವ ಪ್ರಶ್ನೆಸಿತ್ತು:* ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಕಿತ್ತೆಸೆದಿದ್ದಕ್ಕೆ ದೇಶದ ಸಾರ್ವಭೌಮತ್ವವವನ್ನೇ ಪ್ರಶ್ನಿಸಿದ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ವಾಪಾಸ್ ತರುವುದಾಗಿ ಹೇಳಿದೆ. ನಿಜಕ್ಕೂ ಇವರಿಗೆ ಭಾರತೀಯ ಮುಸ್ಲಿಮರ ಮೇಲೆ ಕಾಳಜಿ ಇದೆಯೇ? ಎಂದು ಸಚಿವ ಜೋಶಿ ಪ್ರಶ್ನಿಸಿದರು.
*ಭಾರತೀಯ ಮುಸ್ಲಿಂರ ರಕ್ಷಣೆ ಬೇಕಿಲ್ಲ ಇವರಿಗೆ*: ಕಾಶ್ಮೀರಿ ಪಂಡಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತ್ತು. ಹಿಂದೂ ಮಹಿಳೆಯರು ಅತ್ಯಾಚಾರ, ಅನಾಚಾರಕ್ಕೆ ಒಳಗಾಗಿದ್ದರು. ಭಯೋತ್ಪಾದನೆ ತಾಂಡವವಾಡುತ್ತಿತ್ತು. ಕಾನೂನು ಸುವ್ಯವಸ್ಥೆ ಇರಲಿಲ್ಲ. ಇಡೀ ಕಾಶ್ಮೀರ ಹಿಂಸಾಚಾರದಿಂದ ನರಳುತ್ತಿತ್ತು. ಇದ್ಯಾವುದು ಕಾಂಗ್ರೆಸ್ ಗಣನೆಗೆ ಬರಲಿಲ್ಲ. ಅಲ್ಲಿದ್ದ ಭಾರತೀಯ ಪರ ಮುಸ್ಲಿಂರ ಬಗ್ಗೆ ಕನಿಷ್ಠ ಕಾಳಜಿ ಸಹ ಇಲ್ಲದಂತೆ ನಡೆದುಕೊಂಡಿತು ಎಂದು ಸಚಿವ ಜೋಶಿ ತೀವ್ರ ಬೇಸರದಿಂದ ಹೇಳಿದರು.
ಭಾರತವನ್ನು ಪ್ರೀತಿಸುವ ಮತ್ತು ನಿಜವಾದ ರಾಷ್ಟ್ರಾಭಿಮಾನ ಇರುವ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು.
*ಬಿಜೆಪಿ ಸೇರ್ಪಡೆ:* ಪ್ರಕಾಶ್ ಬುರಬುರೆ ಮತ್ತು ಅವರ ನೂರಾರು ಬೆಂಬಲಿಗರು ಇಂದು ಕಾಂಗ್ರೆಸ್ ತೊರೆದು ಸಚಿವ ಪ್ರಹ್ಲಾದ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ಹಿಡಿದು ಪಕ್ಷ ಸೇರ್ಪಡೆಗೊಂಡರು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಸಚಿವ ಪ್ರಹ್ಲಾದ ಜೋಶಿ ಅವರ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಲು ನಾವೆಲ್ಲ ಬಿಜೆಪಿ ಸೇರಿದ್ದಾಗಿ ಪ್ರಕಾಶ ಬುರಬುರೆ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.