ಸಂಚಾರ ಮಾರ್ಗ ಸ್ಥಗಿತ; ವಿಮಾನಯಾನಕ್ಕೆ ದೊಡ್ಡ ಹಾನಿ

Spread the love

ಹುಬ್ಬಳ್ಳಿ: ಸ್ಥಳೀಯವಾಗಿ ವಿಮಾನಯಾನ ಸಂಪರ್ಕ ಬಲಪಡಿಸಲು ಉಡಾನ್ ಎರಡನೇ ಹಂತದ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನೀಡಲಾಗಿದ್ದ ವಿಮಾನಯಾನ ಮಾರ್ಗಗಳಲ್ಲಿ ಸೇವೆ ಸ್ಥಗಿತವಾಗಿದೆ. ಇಲ್ಲಿಂದ ಕಾರ್ಯಾಚರಣೆ ನಡೆಸುವ ವಿಮಾನಗಳ ಸಂಖ್ಯೆಯೂ ಕಡಿಮೆಯಾಗಿದೆ.
ಈ ಯೋಜನೆಯಡಿ ಜನರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಸಿಗುತಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 2018ರಲ್ಲಿ ಈ ಯೋಜನೆ ಆರಂಭವಾಗಿದ್ದು, 2022ರಲ್ಲಿ ಮಾರ್ಗಗಳು ಸ್ಥಗಿತವಾಗಿವೆ. ಇದರಿಂದಾಗಿ ಪ್ರಯಾಣಿಕರಿಗೆ ಸಹ ತೊಂದರೆ ಆಗಿದೆ. ಉಡಾನ್
ಯೋಜನೆ ಜಾರಿಯಲ್ಲಿದ್ದಾಗ ಸ್ಟಾರ್ ಏರ್, ಸ್ಪೇಸ್ ಜೆಟ್, ಏರ್ ಇಂಡಿಯಾ, ಇಂಡಿಗೊ ಕಂಪನಿಗಳ ವಿಮಾನಗಳು ಸೇವೆ ನೀಡುತ್ತಿದ್ದವು. ಈಗ ಇಂಡಿಗೊ ಕಂಪನಿ ಹೊರತುಪಡಿಸಿ ಉಳಿದ ಕಂಪನಿಗಳು ಇಲ್ಲಿ ಸೇವೆ ನಿಲ್ಲಿಸಿವೆ.
ಈ ಹಿಂದೆ ಅಹಮದಾಬಾದ್, ಸೂರತ್, ಕೊಚ್ಚಿ, ಗೋವಾ, ಮಂಗಳೂರು, ಮೈಸೂರಿಗೆ ವಿಮಾನ ಸೇವೆ ಇತ್ತು. ಈಗ ಇಂಡಿಗೊ ಕಂಪನಿಯು ಚೆನ್ನೈ, ಪುಣೆ, ಹೈದರಾಬಾದ್, ಬೆಂಗಳೂರು, ದೆಹಲಿಗೆ ವಿಮಾನ ಸೇವೆ ಒದಗಿಸುತ್ತಿದೆ. ಮುಂಬೈಗೆ ಇದ್ದ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಕೋವಿಡ್ ಅವಧಿ ಹೊರತು ಪಡಿಸಿದರೆ ನಂತರ ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ವಿಮಾನಗಳ ಸಂಖ್ಯೆಯೂ ಹೆಚ್ಚಿದರೆ ಅನುಕೂಲ ಎಂಬುದು ಪ್ರಯಾಣಿಕರ ಒತ್ತಾಯ ಸಹ ಆಗಿದೆ.
‘ಉಡಾನ್ ಯೋಜನೆಯಡಿ ವಿಮಾನಯಾನ ಕಂಪನಿಗಳಿಗೆ ಸರ್ಕಾರ ಸಬ್ಸಿಡಿ ಕೊಡುತ್ತಿತ್ತು. ಆಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಕಂಪನಿಗಳಿಗೆ ನಷ್ಟವಾ ಗುತ್ತಿರಲಿಲ್ಲ. ಟಿಕೆಟ್ ದರ ಕಡಿಮೆ ಇತ್ತು. ಈ ಯೋಜನೆ ಆರಂಭವಾದ ನಂತರ ಎರಡು ವರ್ಷ ಕೋವಿಡ್ ಬಾಧಿಸಿದ್ದರಿಂದ ಸಂಪೂರ್ಣ ಪ್ರಯೋಜನ ಪಡೆಯಲು ಆಗಲಿಲ್ಲ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಕೆದಾರರ ಸಲಹಾ ಸಮಿತಿವರ ಅಭಿಪ್ರಾಯ ಆಗಿದೆ.
‘ಯೋಜನೆಯಡಿ ನೀಡಲಾಗಿದ್ದ ಮಾರ್ಗಗಳು ಸ್ಥಗಿತವಾದ ನಂತರ ಸಣ್ಣ ವಿಮಾನಯಾನ ಕಂಪನಿಗಳಿಗೆ ಸ್ಪರ್ಧೆ ಎದುರಿಸಿ ಉಳಿಯಲು ಸಾಧ್ಯವಾಗಲಿಲ್ಲ. 80 ಸೀಟುಗಳ ವಿಮಾನಗಳು ಆಗಿದ್ದರಿಂದ ಸರಕು ಸಾಗಣೆಗೆ ಸಹ ಮಿತಿ ಇರುತ್ತದೆ. ಇದರ ಜತೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೆ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ.
ಕಾರ್ಗೊ ಸೇವೆಯೂ ಅಗತ್ಯ: ‘ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕಾರ್ಗೊ ಸೇವೆ ಇದ್ದರೂ ಮೆಟ್ರೊ ನಗರಗಳಲ್ಲಿ ಇರುವಷ್ಟು ಬೇಡಿಕೆ ಇಲ್ಲಿ ಇಲ್ಲ. ಮೆಟ್ರೊ ನಗರಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಸರಕು ಸಾಗಣೆಯಿಂದ ಉತ್ತಮ ಆದಾಯ ಬರುವುದರಿಂದ ನಷ್ಟವಾಗುವುದಿಲ್ಲ. ನಿರೀಕ್ಷೆಯಷ್ಟು ಇಲ್ಲಿ ಸರಕು
ಸಾಗಣೆಗೆ ಬೇಡಿಕೆ ಇಲ್ಲದಿರುವುದೂ ಹಲವು ವಿಮಾನಯಾನ ಕಂಪನಿಗಳು ಇಲ್ಲಿ ವಿಮಾನ ಸೇವೆ ನಿಲ್ಲಿಸಲು ಕಾರಣ’ ಆಗಿದೆ..
ನೈಟ್ ಲ್ಯಾಂಡಿಂಗ್ ಸೇರಿ ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿ ಇವೆ. ಇಲ್ಲಿ ಸೇವೆ ಆರಂಭಿಸುವಂತೆ ವಿಮಾನಯಾನ ಕಂಪನಿಗಳನ್ನು ಮನವೊಲಿಸಬೇಕಿದೆ. ವಿಸ್ತಾರ ಏರ್‌ಲೈನ್ಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿರುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಈ ಕಂಪನಿಗಳ ವಿಮಾನಗಳು ಇಲ್ಲಿಂದ ಸೇವೆ ಆರಂಭಿಸುವ ನಿರೀಕ್ಷೆ ಇದೆ –
*ಗ್ರಾಹಕರ ಸಂತೃಪ್ತಿ ಸಮೀಕ್ಷೆ; ಐದನೇ ಸ್ಥಾನ*
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣವು ಗ್ರಾಹಕರ ಸಂತೃಪ್ತಿ ಸಮೀಕ್ಷೆಯಲ್ಲಿ ದೇಶದ 58 ನಿಲ್ದಾಣಗಳ ಪೈಕಿ ಐದನೇ ಸ್ಥಾನ ಪಡೆದುಕೊಂಡಿದೆ. ‘ಗ್ರಾಹಕರಿಗೆ ನೀಡುತ್ತಿರುವ ಸೇವೆ ಹಾಗೂ ಸೌಲಭ್ಯಗಳನ್ನು ಪರಿಗಣಿಸಿ ಈ ಸ್ಥಾನ ನೀಡಲಾಗಿದೆ. ಸಮೀಕ್ಷೆಯಲ್ಲಿ ನಿಲ್ದಾಣವು ಒಟ್ಟು 5 ಅಂಕಕ್ಕೆ 4.95ರಷ್ಟು ಅಂಕಗಳು ಬಂದಿವೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಮಾಹಿತಿ ನೀಡಿದ್ದಾರೆ. ‘ಚೇತರಿಕೆ ಹಾದಿಯಲ್ಲಿ ನಿಲ್ದಾಣ’ ಇಂಡಿಗೊ ಕಂಪನಿಯು ಕಾರ್ಗೊ ಸೇವೆಯನ್ನು ‘ಸೆಲ್ಫ್ ಹ್ಯಾಂಡ್ಲಿಂಗ್’ ಮಾಡುತ್ತಿದೆ. ಪ್ರತಿ ತಿಂಗಳು ಸರಾಸರಿ 14-15 ಟನ್ ಸರಕು ಬರುತ್ತಿದ್ದು ಇಲ್ಲಿಂದ 5 ಟನ್ ಸರಕು ಕಳಿಸಲಾಗುತ್ತಿದೆ. ಅಹಮದಾಬಾದ್ ಸೇರಿದಂತೆ ಇನ್ನುಳಿದ
ನಗರಗಳಿಗೆ ವಿಮಾನ ಸೇವೆ ಆರಂಭವಾದರೆ ಸರಕು ಸಾಗಣೆ ಪ್ರಮಾಣ ಸಹ ಹೆಚ್ಚಲಿದೆ. ವಿಮಾನದಲ್ಲಿ ಸರಕು ಸಾಗಣೆ ಮಾಡಲು ಹೆಚ್ಚು ವೆಚ್ಚವಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಪ್ರತಿ ಕೆ.ಜಿ ಸರಕು ಸಾಗಣೆಗೆ ₹35-45 ಮಾತ್ರ ತಗುಲುತ್ತದೆ. ಅಲ್ಲದೆ ತ್ವರಿತವಾಗಿ ಸೇವೆ ಸಿಗುತ್ತದೆ. ಕೋವಿಡ್ ನಂತರ ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.


Spread the love

Leave a Reply

error: Content is protected !!