ಧಾರವಾಡ: ನಗರದ ರೆಸಾರ್ಟ್‌ನಲ್ಲಿ ಆರತಕ್ಷತೆ ವೇಳೆ ನಡೆದ ಕಳವು ಪ್ರಕರಣದ ಬೆನ್ನುಬಿದ್ದ ಧಾರವಾಡ ಪೊಲೀಸರು ಮಧ್ಯಪ್ರದೇಶ ರಾಜ್ಯದ ಕಳ್ಳರ ತಂಡದಲ್ಲಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ₹ 61.14 ಲಕ್ಷ ಮೌಲ್ಯದ 964 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.
‘ಬಾಲಕನನ್ನು ಬಾಲನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಶೋಧ ಕಾರ್ಯಾ ಮುಂದುವರಿದಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು.
‘ಧಾರವಾಡದ ಅಧ್ಯಾಪಕ ನಗರದ ಅರುಣಕುಮಾರ ಗಿರಿಯಾಪುರ ಅವರ ಪುತ್ರಿಯ ಆರತಕ್ಷತೆಯಲ್ಲಿ ಮಾರ್ಚ್ 6 ರಂದು ಚಿನ್ನಾಭರಣದ ಚೀಲ ಕಳ್ಳರು ಕದ್ದೊಯ್ದಿದ್ದರು. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು’ ಎಂದರು.
ಪ್ರಕರಣದ ತನಿಖೆಗಾಗಿ ಎಸಿಪಿ ಬಿ.ಎಸ್.ಬಸವರಾಜ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸಿ.ಸಿ ಟಿವಿ ಕ್ಯಾಮೆರಾ ಫೂಟೇಜ್ ಆಧರಿಸಿ ಕಳ್ಳರ ಜಾಡು ಪತ್ತೆ ಶೋಧ ನಡೆಸಿತ್ತು. ಬಾಲಕನೊಬ್ಬ ಬ್ಯಾಗ್ ಒಯ್ಯುವುದು ಸಿ.ಸಿ ಟಿವಿಯಲ್ಲಿ ದಾಖಲಾಗಿತ್ತು. ಸುಳಿವು ಆಧರಿಸಿ ತಂಡ ಕಾರ್ಯಾಚರಣೆ ಮುಂದುವರಿಸಿ, ಮಧ್ಯಪ್ರದೇಶಕ್ಕೆ ತೆರಳಿತ್ತು ಎಂದು ಮಾಹಿತಿ ನೀಡಿದರು.
‘ಆರಂಭದಲ್ಲಿ ತನಿಖಾ ತಂಡವು ಸ್ಥಳೀಯವಾಗಿ ಮಾಹಿತಿ ಕಲೆ ಹಾಕಿತ್ತು. ವಾಹನದ (ಬಳಸಿದ್ ಟ್ಯಾಗ್ ಆಧಾರ) ಸುಳಿವು ಆಧರಿಸಿ ತಂಡವು ಗುಜರಾತ್ ಅಹಮದಾಬಾದ್, ಮಧ್ಯಪ್ರದೇಶದ ಉಜ್ಜೈನ್, ಇಂದೋರ್ ಮೊದಲಾದ ಕಡೆಗಳಲ್ಲಿ ತೆರಳಿ 10 ದಿನಗಳು ಪರಿಶೀಲನೆ ನಡೆಸಿದ್ದರು. ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ಪಚೋರ ತಾಲ್ಲೂಕಿನಲ್ಲಿ ಕಳ್ಳರ ತಂಡವನ್ನು ಪತ್ತೆ ಹಚ್ಚಿದ್ದಾರೆ. ತಂಡವು ಮೊದಲು ಹೋದಾಗ ಊರಿನವರು ವಿರೋಧ ವ್ಯಕ್ತಪಡಿಸಿದ್ಧಾರೆ. ಆನಂತರ, ತಂಡದವರು ಅಲ್ಲಿನ ಸ್ಥಳೀಯ ಪೊಲೀಸರ ನೆರವು ಪಡೆದು ಪರಿಶೀಲನೆ, ವಿಚಾರಣೆ ನಡೆಸಿ ಬಾಲಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ಕೈಗೊಂಡಿದ್ದ ತಂಡಕ್ಕೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು’ ಎಂದು ತಿಳಿಸಿದರು.
‘ಬೇರೆ ಬೇರೆ ಕಡೆಯಿಂದ ಹುಡುಗರನ್ನು ಕರೆತಂದು ಕಳವಿನಲ್ಲಿ ತೊಡಗಿಸುವ ತಂಡವೊಂದು ಮಧ್ಯಪ್ರದೇಶದ ಪಚೋರ ಭಾಗದಲ್ಲಿ ಕಾರ್ಯಪ್ರವೃತವಾಗಿದೆ. ‘ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್’ ಎಂದು ಹೆಸರು ಇಟ್ಟುಕೊಂಡಿದೆ. ಮದುವೆ ಸ್ಥಳಗಳಲ್ಲಿ (ಛತ್ರ ಸಭಾಂಗಣ…) ಕಳವು ಮಾಡುವುದೇ ಈ ತಂಡದ ದಂಧೆ’ ಎಂದು ರೇಣುಕಾ ಸುಕುಮಾರ ತಿಳಿಸಿದರು. ‘ಕಳವು ಕೃತ್ಯಕ್ಕೆ ಬಾಲಕರನ್ನು ಬಳಸಿಕೊಂಡು ಅವರ ಪೋಷಕರಿಗೆ ಕಳ್ಳರ ತಂಡವು ವರ್ಷಕ್ಕೆ ಒಂದಿಷ್ಟು ಹಣ ಕೊಡುತ್ತಾರೆ. ಧಾರವಾಡದ ಕಳವು ಪ್ರಕರಣಕ್ಕಿಂತ ಮುಂಚೆ ಬೇರೆ ಕಡೆಗಳಲ್ಲೂ ಕಳವು ಮಾಡಿದ್ದಾರೆ. ಬೇರೊಂದು ರಾಜ್ಯದಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲೂ ಇದೇ ಬಾಲಕ ಸಿಕ್ಕಿಬಿದ್ದಿದ್ದ ಯಾವುದೇ ಸುಳಿವು ಸಿಗದ ಕಾರಣ ಅಲ್ಲಿನ ಪೊಲೀಸರು ಕೈ ಬಿಟ್ಟಿದ್ದರು. ದೇಶದ ವಿವಿಧೆಡೆ ಈ ‘ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್ ಅಪರಾಧ ಕೃತ್ಯ ಎಸಗಿದೆ. ಕಳ್ಳರ ತಂಡವು ಮಧ್ಯಪ್ರದೇಶಕ್ಕೆ ತಲುಪುವ ಮುನ್ನವೇ ಧಾರವಾಡದ ತನಿಖಾ ತಂಡವು ಅಲ್ಲಿಗೆ ತಲುಪಿತ್ತು. ಪ್ರಕರಣ ಭೇದಿಸುವ ನಿಟ್ಟಿನಲ್ಲಿ ಇದು ಅನುಕೂಲವಾಯಿತು’ ಎಂದರು. ‘ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿ ಸಂಬಂಧಿಕರೊಬ್ಬರ ಮೊಬೈಲ್ ಫೋನ್ ಅನ್ನು ತನಿಖಾ ತಂಡವು ಪರಿಶೀಲಿಸಿದೆ. ಅಂತರ್ಜಾಲದಲ್ಲಿ ‘ಹುಬ್ಬಳ್ಳಿ ಮ್ಯಾರೇಜಸ್’… ಇತ್ಯಾದಿ ಸರ್ಚ್ ಮಾಡಿರುವುದು ಪತ್ತೆಯಾಯಿತು. ದೊಡ್ಡ ಛತ್ರ ಸಭಾಂಗಣಗಳಲ್ಲಿ ಮದುವೆ ಇರುವುದನ್ನು ತಿಳಿದುಕೊಂಡು ಮೊದಲೇ ಸಂಚು ರೂಪಿಸಿರುತ್ತಾರೆ. ಒಳ್ಳೆಯ ಉಡುಪು ಧರಿಸಿ ಮದುವೆಯಲ್ಲಿ ಪಾಲ್ಗೊಂಡು ಚಿನ್ನಾಭರಣ ಇತ್ಯಾದಿ ಮೇಲೆ ಕಣ್ಣಿಟ್ಟು ಗಮನ ಬೇರೆಡೆಗೆ ಸೆಳೆದು ಕೃತ್ಯ ಎಸಗುತ್ತಾರೆ. ಕಳವು ಮಾಡಿಕೊಂಡು ಹೋಗುವಾಗ ಸ್ವಲ್ಪ ದೂರ ಸಾಗಿದ ತಕ್ಷಣ ವಾಹನ ಬದಲಾಯಿಸಿಕೊಂಡು ತೆರಳುತ್ತಾರೆ. ಟೋಲ್ ಬಳಕೆ ಮಾಡದಿರುವುದು ಫೋನ್ ಆಫ್ ಮಾಡಿ ಸಾಗುವುದು ಈ ತಂಡದ ಕಳವು ನಡೆಸುವ ಕಾರ್ಯವಿಧಾನ’ ಎಂದರು.
Check Also
*ಜ.12 ರಂದು ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಹಾಗೂ ಉಣಕಲ್ ಕೆರೆ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ*
Spread the loveಹುಬ್ಬಳ್ಳಿ ಜ.10: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾದಡಿಯಲ್ಲಿ …