ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ವಾತಾವರಣವನ್ನು ಅರಿತಿದ್ದೇನೆ. ಎಲ್ಲವನ್ನೂ ಶಮನ ಮಾಡಿಕೊಂಡು ಮುನ್ನಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಟಿಕೆಟ್ ಘೋಷಣೆಯ ಬಳಿಕ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹೊಸದಿರಬಹುದು. ಆದರೆ, ಅಪಾರ ರಾಜಕೀಯ ಅನುಭವ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೆಳಗಾವಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಪ್ರಧಾನಿ ನರೆಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಬೆಳಗಾವಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಹಾಗೂ ಬೆಳಗಾವಿಯ ಎಲ್ಲ ನಾಯಕರಿಗೆ ಆಭಾರಿಯಾಗಿದ್ದೇನೆ ಎಂದರು.
ದಿ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವೆ. ಬೆಳಗಾವಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಣ ಮೇಲೆ ಚುನಾವಣಾ ನಡೆಯುವುದಿಲ್ಲ. ಇದು ರಾಷ್ಟ್ರೀಯ ಚುನಾವಣೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದ್ದು, ಯಾವುದೇ ಪದವಿಗೆ ಅಥವಾ ಸಚಿವ ಸ್ಥಾನಕ್ಕೆ ಆಸೆ ಪಡುವುದಿಲ್ಲ. ತಾನಾಗಿಯೇ ಒಲಿದು ಬರಬೇಕು ಎಂದು ತಿಳಿಸಿದರು.