ಚಿರತೆ ಓಡಾಟ; ಜನರಲ್ಲಿ ಆತಂಕ

Spread the love

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಂಭವಿ ನಗರದಲ್ಲಿ ಸ್ಥಳೀಯರೊಬ್ಬರಿಗೆ ಬುಧವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿದೆ.
‘ವಾಯುವಿಹಾರಕ್ಕೆ ತೆರಳಿದ್ದಾಗ ಚಿರತೆ ಕಾಣಿಸಿತು. ನನ್ನಿಂದ ಸುಮಾರು 15 ಅಡಿ ಅಂತರದಲ್ಲಿ ಅದು ಸಾಗಿತು. ಹೊಯ್ಸಳ ನಗರದ ( ಉನ್ನತ ಶಿಕ್ಷಣ ಅಕಾಡೆಮಿ ಪ್ರದೇಶ) ಕಡೆಗೆ ಹೋಯಿತು. ಇಲ್ಲಿ ಚಿರತೆ ನೋಡಿದ್ದು ಇದೇ ಮೊದಲು’ ಎಂದು ಜಾನಪದ ವಿ.ವಿ ಬೋಧಕರೂ ಆಗಿರುವ ಶಾಂಭವಿ ನಗರದ ನಿವಾಸಿಗಳು ತಿಳಿಸಿದರು.
‘ಹೊಯ್ಸಳ ನಗರ, ಶಾಂಭವಿ ನಗರ, ರವೀಂದ್ರನಗರ, ಗಣೇಶ ನಗರದ ನಿವಾಸಿಗಳು ಎಚ್ಚರಿಕೆ ಇರಬೇಕು’ ಎಂದು ಈ ಭಾಗದ ಜನರು ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ ಸಂದೇಶ ಹಾಕಿದ್ದಾರೆ.
ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಶಾಂಭವಿ ನಗರ, ವಿಶ್ವವಿದ್ಯಾಲಯ ಆವರಣದ ಅಂಚಿನ ಭಾಗದಲ್ಲಿ ನಿಗಾ ವಹಿಸಿದ್ದಾರೆ.
‌‌‘ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿಲ್ಲ. ಮರಗಿಡಗಳ ಎಲೆಗಳು ಉದುರಿರುವ ಭಾಗದಲ್ಲಿ ಅದು ಸಾಗಿರಬೇಕು’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
‘ಈಗ ಬೇಸಿಗೆ. ನೀರು ಅರಸಿ ಚಿರತೆ ಈ ಭಾಗಕ್ಕೆ ಬಂದಿರಬಹುದು. ಶಾಂಭವಿ ನಗರ, ಹೊಯ್ಸಳ ನಗರ ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ತಿರುಗುವರು. ಚಿರತೆ ಸುಳಿವು ಪತ್ತೆಯಾದರೆ ಬೋನು ಇಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್‌ ಗೌರಿ ತಿಳಿಸಿದರು.


Spread the love

Leave a Reply

error: Content is protected !!