ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ನನಗೆ ಹೊಸದೇನಲ್ಲ. ಅಲ್ಲಿನ ಜನರ, ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದೇನೆ. ಹೀಗಾಗಿ ನನ್ನ ಬಗ್ಗೆ ಮತ್ತು ಸ್ಫರ್ಧೆಯ ಬಗ್ಗೆ ಯಾವುದೇ ಭಿನ್ನಮತ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಓಡಾಡಿದ್ದೇನೆ. ಕಳೆದ ಕೆಲ ದಿನಗಳಿಂದ ಅಲ್ಲಿನ ಮುಖಂಡರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಿರಿಯರು, ಕಿರಿಯರನ್ನೂ ಗಣನೆಗೆ ತೆಗೆದುಕೊಂಡಿದ್ದೇನೆ. ಡಾ. ಪ್ರಭಾಕರ ಕೋರೆ ಅವರ ಜೊತೆಗೂ ಮಾತನಾಡಿದ್ದೇನೆ. `ಮನೆಗೆ ಬಂದ್ರೆ ಹೇಗೆ ಬೇಡಾ ಅನ್ನೋಕೆ ಆಗತ್ತೆ’ ಎಂದು ಕೋರೆ ತಿಳಿಸಿದ್ದಾರೆ ಎಂದರು.
ಬೆಳಗಾವಿಯಲ್ಲಿ ಶೆಟ್ಟರ್ ಗೋ ಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಕೆಲವರು ವಿರೋಧ ವ್ಯಕ್ತ ಪಡಿಸಿರಬಹುದು. ಕೆಲ ನಾಯಕರು ಸಭೆಯನ್ನೂ ಮಾಡಿದ್ದಾರೆ. ಆದರೆ, ಅವರ ನಿರ್ಣಯ ಅಂತಿಮವಲ್ಲ. ಯಾವ ನಾಯಕರೂ ನೇರವಾಗಿ ಮಾತನಾಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ೧೭ ಲಕ್ಷ ಮತದಾರರಿದ್ದಾರೆ. ಮೇಲಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.
ನಾನು ಬೆಳಗಾವಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ. ಬಿಜೆಪಿಯ ಮೂರನೇ ಪಟ್ಟಿ ಭಾನುವಾರ ಘೋಷಣೆ ಆಗುವ ಸಾಧ್ಯತೆ ಇದೆ. ನನ್ನ ಹೆಸರು ಅಧಿಕೃತ ಘೋಷಣೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
