ಹುಬ್ಬಳ್ಳಿ,: ಕ್ಯಾನ್ಸರ್ ಆರೈಕೆಗೆ ಹೆಸರಾಗಿರುವ ಹುಬ್ಬಳ್ಳಿಯ ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಗುರುತಿಸಲ್ಪಟ್ಟ ಮಹಿಳಾ ಪೌರಕಾರ್ಮಿಕರ ಗಮನಾರ್ಹ ಕೊಡುಗೆಯನ್ನು ಸ್ಮರಿಸಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉತ್ತಮ ಸೇವೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಾಗಿ 10 ಮಹಿಳಾ ಪೌರಕಾರ್ಮಿಕರು ಮತ್ತು 5 ಎಚ್ಸಿಜಿ ಮಹಿಳಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಆಸ್ಪತ್ರೆಯು ಮಾರ್ಚ್ 8 ರಿಂದ ಒಂದು ವಾರದವರೆಗೆ ಪೌರಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತ ಪ್ಯಾಪ್ ಸ್ಮಿಯರ್ ಮತ್ತು ಮ್ಯಾಮೊಗ್ರಾಮ್ ಪರೀಕ್ಷೆಗಳನ್ನು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಹುಬ್ಬಳ್ಳಿಯ ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ ಆವರಣದಲ್ಲಿ ಸನ್ಮಾನ ನಡೆಸಲಾಯಿತು. ಸಮುದಾಯದ ಸುಧಾರಣೆಗೆ ಈ ಮಹಿಳೆಯರ ಅಮೂಲ್ಯ ಕೊಡುಗೆಗಳನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ, ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ನ ಕರ್ನಾಟಕ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಷಾ ಕುಮಾರ್ ಮಾತನಾಡಿ, “ಸಮುದಾಯದ ಯೋಗಕ್ಷೇಮಕ್ಕಾಗಿ ಸಮರ್ಪಿತವಾಗಿರುವ ಸಂಸ್ಥೆಯಾಗಿ, ಈ ಮಹಿಳೆಯರ ಅತ್ಯುತ್ತಮ ಸೇವೆಗಾಗಿ ಮತ್ತು ಸಮಾಜಕ್ಕಾಗಿ ಅವರ ಅಚಲ ಬದ್ಧತೆಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.
ಇವರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲು, ಅವರಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಸಮಯೋಚಿತವಾಗಿ ಪತ್ತೆಹಚ್ಚುವುದು ಮುಖ್ಯ. ಪ್ರತಿಯೊಬ್ಬರ ಕೊಡುಗೆಗಳನ್ನು ಗುರುತಿಸುವ ಮತ್ತು ಸಂಭ್ರಮಿಸುವ ಅಂತರ್ಗತ ಮತ್ತು ಪೂರಕ ವಾತಾವರಣ ಬೆಳೆಸುವುದು ನಮ್ಮ ಉದ್ಧೇಶ,” ಎಂದು ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ಎಚ್ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಬ್ದುಲ್ ರಹೀಂ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಪ್ರತಿಬಿಂಬಿಸುವ, ಮತ್ತು ನಮ್ಮ ಸಮುದಾಯಗಳನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸುವ ಸಮಯವಾಗಿದೆ. ಸಮಯೋಚಿತ ಮತ್ತು ನಿಖರ ರೋಗಪತ್ತೆ ಮತ್ತು ಚಿಕಿತ್ಸೆಯನ್ನು ನೀಡಲು ಎಚ್ಸಿಜಿ ಆಸ್ಪತ್ರೆ ಬದ್ಧವಾಗಿದೆ. ಮುಂಚಿತವಾಗಿ ಪತ್ತೆಹಚ್ಚುವುದರಿಂದ ಅಸಂಖ್ಯಾತ ಜೀವಗಳನ್ನು ಉಳಿಸಬಹುದು. ಈ ಕಾರ್ಯಕ್ರಮ ಮಹಿಳೆಯರನ್ನು, ಅವರ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ತಿಳುವಳಿಕೆಯೊಂದಿಗೆ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ,” ಎಂದರು.
