ಹುಬ್ಬಳ್ಳಿ ಮಾ.7: ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವವು ನಡೆಯುವುದರಿಂದ ಮಾರ್ಚ 9 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಕಾರವಾರ ರೋಡ್ ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ವಾಹನಗಳಿಗೆ, ಬೈಪಾಸ್ ಮಾರ್ಗವಾಗಿ ತಾರಿಹಾಳ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಹುಬ್ಬಳ್ಳಿ ಶಹರ ಪ್ರವೇಶ ಮಾಡಲು ಅನುಕೂಲ ಮಾಡಲಾಗಿದೆ.
ಎಂ.ಟಿ.ಮಿಲ್ಲ ಕ್ರಾಸ್ ಕಡೆಯಿಂದ ಇಂಡಿ ಪಂಪ ಸರ್ಕಲ್ ಕಡೆಗೆ ಬರುವ ವಾಹನಗಳಿಗೆ ಪರ್ಯಾಯವಾಗಿ ಚಾಟ್ಲಿ ಮಠ ಕ್ರಾಸ್, ಕಮರಿಪೇಟ್ ಪೊಲೀಸ್ ಠಾಣೆಯ ಕ್ರಾಸ್, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪೂರ ಚೌಕ, ಗಬ್ಬೂರ ಮಾರ್ಗವಾಗಿ ಹೋಗುವುದು ಅಥವಾ ವಾಣಿ ವಿಲಾಸ ಸರ್ಕಲ್ ಮುಖಾಂತರ ಗೋಕುಲ ರೋಡ್‌ನಲ್ಲಿ ಹಾಯ್ದು ಬೈಪಾಸ್ ಸೇರುವುದು.
ನ್ಯೂ ಇಂಗ್ಲೀಷ್ ಸ್ಕೂಲ್ ಕ್ರಾಸ್ ಕಡೆಯಿಂದ ಇಂಡಿ ಪಂಪ ಸರ್ಕಲ್ ಕಡೆಗೆ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅಕ್ಷಯ ಪಾರ್ಕ ಸರ್ಕಲ್ ಕಡೆಯಿಂದ ಮುರುಡೇಶ್ವರ ಫ್ಯಾಕ್ಟರಿ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಯಾವುದೇ ಭಾರೀ ವಾಹನಗಳು ಸಂಚರಿಸದಂತೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಶ್ರೀ ಸಿದ್ಧಾರೂಢ ಮಠದ ಜಾತ್ರೆಗೆ ಬರುವ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಇತರೇ ವಾಹನಗಳಿಗೆ ಶ್ರೀ ಸಿದ್ಧಾರೂಢ ಮಠದ ಸುತ್ತ ಮುತ್ತಲು ಪ್ರತ್ಯೇಕವಾಗಿ ಪಾರ್ಕಿಂಗ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಹೆಚ್ಚಿನ ವಾಹನ ದಟ್ಟನೆಯಾದಲ್ಲಿ ಅನುಕೂಲಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆಯನ್ನು ಮಾಡಿಕೊಳ್ಳಲಾಗುವುದು. ಪರ್ಯಾಯ ಮಾರ್ಗದಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚರಿಸಿ, ಸಹಕರಿಸಲು ಮತ್ತು ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
