ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಕಾರ, ಸಹಭಾಗಿತ್ವವಿದೆ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ

Spread the love

ಧಾರವಾಡ ಮಾ.03: ಪಲ್ಸ್ ಪೋಲಿಯೋ ರಾಷ್ಟೀಯ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯ ಸಂಪೂರ್ಣ ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ. ಲಯನ್ಸ್, ರೋಟರಿ, ಐಎಂಎ ಅಂತಹ ಸಂಸ್ಥೆಗಳು ಸಹ ಸಹಕಾರ ನೀಡುತ್ತಿವೆ. ಈ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಜಿಲ್ಲೆಯ ಐದು ವರ್ಷದೊಳಗಿನ ಸುಮಾರು 2,05,113 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ನವೀಕೃತ ಗ್ರಾಮೀಣ ಮತ್ತು ಉಪನಗರ ಬಸ್ ನಿಲ್ದಾಣ ಪಕ್ಕದಲ್ಲಿರುವ ಮಹಾನಗರಪಾಲಿಕೆ ಅಧೀನದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಪಲ್ಸ್ ಪೋಲಿಯೋ ನಿರ್ಮೂಲನೆಯಲ್ಲಿ ನಮ್ಮ ಭಾರತ ದೇಶವು ಗಣನೀಯ ಪ್ರಗತಿಯನ್ನು ಸಾಧಿಸಿದೆ. ಆದರೆ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ವೈರಸ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಮತ್ತೆ ನಮ್ಮಲ್ಲಿ ಪೋಲಿಯೋ ಪ್ರಕರಣಗಳು ಬರಬಹುದಾದ ಸಾಧ್ಯತೆ ಇರುವುದರಿಂದ ನಾವು ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾಡಿ, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವುದು ಅವಶ್ಯಕವಾಗಿದೆ ಎಂದು ಡಾ.ಶಶಿ ಪಾಟೀಲ ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇಂದು ಪೋಲಿಯೋ ಬೂತ್‍ಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ 4 ಮತ್ತು 5 ರಂದು ಹಾಗೂ ನಗರ ಪ್ರದೇಶದಲ್ಲಿ ಮಾರ್ಚ್ 4 ರಿಂದ 6 ರವರೆಗೆ ಮನೆ ಮನೆ ಭೇಟಿ ನೀಡುವ ಮೂಲಕ ಆರೋಗ್ಯ ಕಾರ್ಯಕರ್ತೆಯರು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
ಸಾರ್ವಜನಿಕರು ಈ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಸಿದ್ದಪಡಿಸಿರುವ ಕ್ರೀಯಾ ಯೋಜನೆ ಅನುಸಾರ ಹಲವು ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಐದು ವರ್ಷದೊಳಗಿನ ಜಿಲ್ಲೆಯ 2,05,113 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಒಟ್ಟು 891 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, 92 ಟ್ರಾಂಜಿಸ್ಟ್ ತಂಡಗಳನ್ನು ನೇಮಿಸಲಾಗಿದೆ. ಮತ್ತು 57 ಮೊಬೈಲ್ ತಂಡಗಳನ್ನು ಸಹ ರಚಿಸಲಾಗಿದೆ. ಪಲ್ಸ್ ಪೋಲಿಯೋ ಯಶಸ್ವಿಗಾಗಿ 3,822 ಜನ ವ್ಯಾಕ್ಸಿನೇಟರ್ಸ್ ಮತ್ತು 212 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. 4 ದಿನಗಳ ಈ ಲಸಿಕಾ ಅಭಿಯಾನದಲ್ಲಿ ಒಟ್ಟು 4,21,180 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ,ಮಹಾನಗರಪಾಲಿಕೆ ಸದಸ್ಯ ಸುರೇಶ ಬೆದ್ರೆ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು. ಟಿ.ಬಿ.ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಡಾ.ಅನಿಲ್ ಅವರು ಮಾಯನಾಡಿದರು. ಐಇಸಿ ವಿಭಾಗದ ಕೆ.ಬಿ.ಚಬ್ಹಾಣ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಹೆರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶ್ವಿನಿ ಅನಂತಯ್ಯ, ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಐಎಂಎ ಜಿಲ್ಲಾ ಅಧ್ಯಕ್ಷ ಡಾ.ಸತೀಶ ಇರಕಲ್ಲ, ಆರ್.ಸಿ.ಎಚ್.ಕ್ಲಬ್ ಅಧ್ಯಕ್ಷ ಅರುಣ ಹೆಬ್ಳಿಕರ, ಲಯನ್ಸ್ ಕ್ಲಬ್ ದ ಅನಿರುದ್ಧ ಮತ್ತು ಡಾ.ಶೋಭಾ ಕರಿಗುದ್ರಿ, ಶ್ರೇಯಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಇತರರು ಭಾಗವಹಿಸಿದ್ದರು.


Spread the love

Leave a Reply

error: Content is protected !!