ಹುಬ್ಬಳ್ಳಿ: ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಹುಬ್ಬಳ್ಳಿಯಲ್ಲಿ ಇಂದು ನಡೆದ ಧಾರವಾಡ ಲೋಕಸಭಾ ಕ್ಷೇತ್ರದ ಕುರುಬ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಮೂರನೇ ಅತಿದೊಡ್ಡ ಸಮುದಾಯ ಇದಾಗಿದೆ. ಎಸ್ಟಿ ಮೀಸಲಾತಿ ಕೊಡುವ ಸಂಬಂಧ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದರು.
*ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸಿದೆ:* ಕುರುಬ ಸಮಾಜದವರಿಗೆ ಈಗಾಗಲೇ ಬಿಜೆಪಿಯಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಾನಮಾನಗಳನ್ನು ಪಕ್ಷದೊಳಗೆ ಕಲ್ಪಿಸುತ್ತೇವೆ ಎಂದೂ ಸಚಿವ ಜೋಶಿ ತಿಳಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಕಾ ಕಾಲಲ್ಕರ್ ಹಾಗೂ ಮಂಡಲ್ ವರದಿಯನ್ನು ತಿರಸ್ಕರಿಸಲಾಗಿತ್ತು. ಆದರೆ, ನಮ್ಮ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸುವ ಮೂಲಕ ಒಬಿಸಿ ಸಮುದಾಯದ ಹಿತರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಶೇ.60ರಷ್ಟು ಒಬಿಸಿ ಸಂಸದರಿದ್ದಾರೆ ಎಂದ ಸಚಿವರು, ಕುರುಬ ಸಮುದಾಯಕ್ಕೆ ಆದಾಯ ಪ್ರಮಾಣ ಪತ್ರದ ಮಿತಿಯನ್ನು 12 ಲಕ್ಷ ರೂ.ಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಕನಕ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕುರುಬ ಸಮುದಾಯಕ್ಕೆ ಕೇಂದ್ರದಿಂದ ಸಲ್ಲಬೇಕಾದ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ಪ್ರಾಮಾಣಿಕವಾಗಿ ತಲುಪಿಸುವ ಹೊಣೆ ತಮ್ಮದು ಎಂದು ಆಶ್ವಾಸನೆ ನೀಡಿದರು.
ಕುರುಬ ಸಮುದಾಯ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ವಿಭಿನ್ನ ರೀತಿಯಲ್ಲಿ ನೀಡುತ್ತಾ ಬಂದಿದೆ. ಇಂಥ ಸಮುದಾಯದ ಏಳಿಗೆಗೆ ಓರ್ವ ಜನಪ್ರತಿನಿಧಿಯಾಗಿ ಸಹಕರಿಸುವುದು ನನ್ನ ಕರ್ತವ್ಯ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ರಾಜ್ಯ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ರವಿ ತಂಡಿನ, ಹಾಲುಮತ ಸಮಾಜದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.