ಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, 2024 ರ, ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಧಾರವಾಡ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ (ಕೆಆರ್‌ಡಿಸಿ) ಹಾಗೂ ಸೆಂಟ್ರಲ್ ಲರ್ನಿಂಗ್ ಥಿಯೇಟರ್ (ಸಿಎಲ್‌ಟಿ) ಮತ್ತು ಶಾಶ್ವತ ಕಟ್ಟಡದಲ್ಲಿನ ಎರಡು ಹೊಸ ಪ್ರವೇಶ ದ್ವಾರಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಉಪರಾಷ್ಟ್ರಪತಿಗಳು ಅಧ್ಯಾಪಕರು ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ತ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಉಪಸ್ಥಿತರಿರುವರು.
ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅದ್ಯಕ್ಷರಾದ ಶಾಸಕ ಅಬ್ಬಯ್ಯ ಪ್ರಸಾದ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ವಿನಯ ಕುಲಕರ್ಣಿ, ವಾಯುವ್ಯ ಸಾರಿಗೆ ನಿಗಮದ ಅದ್ಯಕ್ಷ ಹಾಗೂ ಶಾಸಕ ಭರಮಗೌಡ ಅಲಗೌಡ ಕಾಗೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಎಂ.ಗಣೇಶ, ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಎನ್.ಹೆಚ್.ಕೋನರೆಡ್ಡಿ, ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಬೇಲೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಾವಕ್ಕ ಬಿ. ಶಿರೂರು ಅತಿಥಿಗಳಾಗಿ ಭಾಗವಹಿಸುವರು.
ಐಐಟಿ ಧಾರವಾಡದ ನಿರ್ದೇಶಕ ಪ್ರೊಫೆಸರ್ ವೆಂಕಪ್ಪಯ್ಯ ಆರ್. ದೇಸಾಯಿ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಲವಾರು ಗಣ್ಯರು, ಐಐಟಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿರುತ್ತಾರೆ ಎಂದು ಐಐಟಿ ಪ್ರಕಟಣೆ ತಿಳಿಸಿದೆ.