ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ತರ್ಲಘಟ್ಟ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ರಾತ್ರಿ 300 ಅಡಿಯ ಬಾವಿಯೊಂದಕ್ಕೆ ಬಿದ್ದಿದ್ದು ಕುಂದಗೋಳದ ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ವ್ಯಕ್ತಿಯನ್ನು ರಕ್ಷಿಸುವ ಘಟನೆ ಜರುಗಿದೆ.
ಗ್ರಾಮದ ಮಾಲತೇಶ ನೀಲಪ್ಪ ಮಾವನೂರ ಎಂಬ 16 ವಯಸ್ಸಿನ ವ್ಯಕ್ತಿಯನ್ನು ರಾತ್ರಿ 9.30ರ ಸುಮಾರು ಪಾಳುಬಿದ್ದ ಈ ಬಾವಿಗೆ ಬಿದ್ದಿರುವ ಕುರಿತು ಸ್ಥಳಿಯರು ಕುಂದಗೋಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಕೂಡಲೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಹಾಗೂ ಬುಟ್ಟಿಯ ಸಹಾಯದಿಂದ 300 ಅಡಿಯಲ್ಲಿ ಬಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು.
‘ಈ ಬಾವಿಯಲ್ಲಿ ನೀರು ಇಲ್ಲದೆ ಇರುವುದರಿಂದ ಜನರು ವ್ಯರ್ಥವಾದ ಬಟ್ಟೆ ಮತ್ತಿತರ ವಸ್ತುಗಳನ್ನು ಹಾಕಿದ್ದರಿಂದ ಅದರ ಮೇಲೆ ಈ ವ್ಯಕ್ತಿ ಬಿದ್ದ ಪರಿಣಾಮ ಯಾವುದೆ ಗಂಭೀರ ಗಾಯಗಳಾಗಿಲ್ಲ. ಸ್ಥಳಿಯ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ‘ ಎಂದು ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ದೊಡ್ಡವಾಡ ಹೇಳಿದರು.
