ಹುಬ್ಬಳ್ಳಿ: ‘ಅಮೃತ ಭಾರತ ನಿಲ್ದಾಣ ಯೋಜನೆ–2ರ ಅಡಿ ದೇಶದ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿ, 1,500 ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, ಸಮರ್ಪಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆ.26ರಂದು ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಿದ್ದಾರೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ₹656.43 ಕೋಟಿ ವೆಚ್ಚದಲ್ಲಿ 31 ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು. ₹330.62 ಕೋಟಿ ವೆಚ್ಚದಲ್ಲಿ 24 ರಸ್ತೆ ಮೇಲ್ಸೇತುವೆ, ಕೆಳಸೇತುವೆಗಳು ನಿರ್ಮಾಣವಾಗಲಿವೆ’ ಎಂದರು.
‘ದಕ್ಷಿಣ–ಮಧ್ಯ ರೈಲ್ವೆಗೆ ಒಳಪಡುವ ಕರ್ನಾಟಕದ ಯಾದಗಿರಿ, ರಾಯಚೂರು ಮತ್ತು ಕೇಂದ್ರ ರೈಲ್ವೆ ವಲಯದ ಗಾಣಗಾಪುರ ರಸ್ತೆ ನಿಲ್ದಾಣವನ್ನು ಸಹ ಈ ಯೋಜನೆ ಅಡಿ ಪುನರಾಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
‘ಅಭಿವೃದ್ಧಿಯಾಗಲಿರುವ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್, ಎಸ್ಕಲೇಟರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ, ಸುರಕ್ಷತೆಗೆ ಒತ್ತು ನೀಡಲಾಗುತ್ತದೆ’ ಎಂದರು.
‘ಬೆಂಗಳೂರು–ಮುಂಬೈ ನಡುವೆ ದ್ವಿಪಥ, ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಉಳಿದಿರುವ ವಿದ್ಯುದ್ದೀಕರಣ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.
‘ಬೆಂಗಳೂರು–ಜೋಲಾರ್‌ಪೇಟೆ, ಬೆಂಗಳೂರು– ಚೆನ್ನೈ ನಡುವೆ 160 ಕಿ.ಮೀ. ಮತ್ತು ನೈರುತ್ಯ ರೈಲ್ವೆ ವ್ಯಾಪ್ತಿಯ ಉಳಿದೆಡೆ ಶೀಘ್ರ 130 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ಬೆಂಗಳೂರು–ಹಾಸನ ನಡುವಿನ ಮಾರ್ಗವನ್ನು ಮೇಲ್ದರ್ಜೆ ಗೇರಿಸಲಾಗುವುದು’ ಎಂದರು.
‘ಧಾರವಾಡ- ಕಿತ್ತೂರು- ಬೆಳಗಾವಿ ನಡುವೆ ಹೊಸ ರೈಲು ಮಾರ್ಗಕ್ಕೆ ಅನುದಾನದ ಕೊರತೆ ಇಲ್ಲ. ರಾಜ್ಯ ಸರ್ಕಾರ ಜಾಗ ಹಸ್ತಾಂತರಿಸಿದರೆ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.
