ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ವುತ್ತಿರುವ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬದಲಿಗೆ ನೈಟ್ ಕರ್ಫ್ಯೂ ಸೇರಿದಂತೆ ಕಠಿಣ ನಿಯನಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಿದ ನಂತರ ಹಾಗೂ ಪ್ರಧಾನಿ ಮೋದಿ ಭಾಷಣದ ಬಳಿಕ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗ ಸೂಚಿಗಳನ್ನು ಹೊರಡಿಸಿದೆ. ಈ ಪ್ರಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾಡದೇ ಇರಲು ನಿರ್ಧರಿಸಿದೆ. ಆದರೆ, ಲಾಕ್ಡೌನ್ ಬದಲಿಗೆ ರಾತ್ರಿ ಕರ್ಫ್ಯೂವನ್ನು ರಾಜ್ಯಾಾದ್ಯಂತ ಜಾರಿಗೆ ತರುವುದಾಗಿ ಘೋಷಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಇರಲಿದೆ. ಬೇರೆ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ವೀಕೆಂಡ್ (ವಾರಾಂತ್ಯ) ಕರ್ಫ್ಯೂ ಜಾರಿಗೆ ತರಲಾಗಿದೆ. ಇದು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯ ತನಕ ಅನುಷ್ಠಾನದಲ್ಲಿ ಇರುತ್ತದೆ. ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗದಿದ್ದರೂ ಸೆಮಿ ಲಾಕ್ಡೌನ್ ಮಾದರಿಯಲ್ಲಿ ಕೆಲವು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಶಾಲಾ – ಕಾಲೇಜು, ಸಿನಿಮಾ, ಜಿಮ್, ಯೋಗ ಸೆಂಟರ್, ಶಾಪಿಂಗ್ ಮಾಲ್ಗಳಲ್ಲಿನ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಕಿ ತಿಳಿಸಲಾಗಿದೆ.
