ಹುಬ್ಬಳ್ಳಿ: ಕನ್ನಡ ನಾಡು ನುಡಿ ಸಂಸ್ಕೃತಿಗೆ ಹುಬ್ಬಳ್ಳಿ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ ಇಲ್ಲಿಯೇ ಕನ್ನಡಕ್ಕೆ ಅಪಮಾನ ಆಗುತ್ತಿದೆ. ಹೀಗಿದ್ದರೂ ಯಾರೊಬ್ಬರೂ ಕೂಡ ಕಾಳಜಿ ವಹಿಸದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಕನ್ನಡದ ಧ್ವಜ ಹರಿದಿದ್ದು, ಧ್ವಜಸ್ತಂಭ ಅನಾಥಪ್ರಜ್ಞೆಗೆ ಸಿಲುಕಿದೆ. ಕನ್ನಡಪರ ಸಂಘಟನೆಗಳಾಗಲಿ, ಸ್ಥಳೀಯ ಆಡಳಿತವಾಗಲಿ ಒಂದಿಷ್ಟು ಗಮನ ಹರಿಸುತ್ತಿಲ್ಲ. ಯಾವುದೋ ದೇಶದಲ್ಲಿ ಇನ್ನಾವುದೋ ರಾಜ್ಯದಲ್ಲಿ ಏನಾದರೂ ಆದರೆ ಪ್ರತಿಭಟಿಸುವ, ಕನ್ನಡ ನಾಮಫಲಕಕ್ಕಾಗಿ ಬೀದಿಗಿಳಿಯುವವರಿಗೂ ಬಣ್ಣ ಕಳೆದುಕೊಂಡು ಹರಿದು ಹಾರಾಡುತ್ತಿರುವ ಕನ್ನಡ ಬಾವುಟ ಮಾತ್ರ ಕಾಣಿಸದಿರುವುದು ನಿಜಕ್ಕೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದು ಬೇರೆಲ್ಲಿಯದ್ದೋ ಅಲ್ಲ. ಕನ್ನಡ ಭಾಷೆ ವಿಚಾರಕ್ಕೆ ಬಂದರೆ ತನ್ನದೇ ಮಹತ್ವ ಹೊಂದಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಹೊರವಲಯದಲ್ಲಿರುವ ಗಬ್ಬೂರು ವೃತ್ತದ ಕಥೆ. ಗಬ್ಬೂರು ವೃತ್ತದಲ್ಲಿರುವ ಕನ್ನಡದ ಆಳೆತ್ತರದ ಬಾವುಟ ಮಾಸಿ ಹರಿದು ಅದೆಷ್ಟೋ ದಿನಗಳಾಗಿವೆ. ಯಾರೊಬ್ಬರೂ ಅದನ್ನು ಬದಲಾಯಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಈ ವೃತ್ತವಿದ್ದು, ನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತವೆ. ರಾಜ್ಯದವರು, ಹೊರರಾಜ್ಯದವರು ಮಾಸಿದ-ಹರಿದ ಧ್ವಜ ನೋಡುತ್ತಲೇ ಸಾಗುತ್ತಿದ್ದು ನಾಡಧ್ವಜ ಬಗ್ಗೆ ಕನ್ನಡಿಗರ ಅಭಿಮಾನ ಶೂನ್ಯತೆ ಬಗ್ಗೆ ಹಿಡಿಶಾಪ ಹಾಕುವಂತಾಗಿದೆ.
ಗಬ್ಬೂರು ವೃತ್ತಕ್ಕೆ ವರನಟ ಡಾ.ರಾಜಕುಮಾರ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಡಾ.ರಾಜಕುಮಾರ ಭಾವಚಿತ್ರ, ನಾಡಿನ ಸಾಹಿತಿಗಳು, ಮಹಾತ್ಮರ ಭಾವಚಿತ್ರಗಳನ್ನು ಹಾಕಲಾಗಿದೆ. ಜತೆಗೆ ಅಲ್ಲಿಯೇ ಕನ್ನಡಧ್ವಜ ಸ್ತಂಭವೂ ಇದೆ. ಬಾವುಟದ ಒಂದಿಷ್ಟು ಭಾಗ ಹರಿದು ನೆಲದ ಮೇಲೆ ಬಿದ್ದಿದೆ. ಇನ್ನಷ್ಟು ಭಾಗ ಸ್ತಂಭದಲ್ಲಿ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿದೆ. ಕನ್ನಡ ಬಾವುಟವನ್ನು ಸರಿಯಾದ ಸ್ಥಿತಿಯಲ್ಲಿಡಲು ಸಾಧ್ಯವಾಗದಿದ್ದರೆ ಧ್ವಜಸ್ತಂಭ ಹಾಗೂ ಬಾವುಟವನ್ನು ತೆಗೆದಿರಿಸಲಿ ಇಲ್ಲವೆ ಹೊಸ ಧ್ವಜವನ್ನಾದರೂ ಹಾಕಬೇಕಾಗಿದೆ. ನಿತ್ಯವೂ ಒಂದಿಲ್ಲ ಒಂದ ಕಾರಣಕ್ಕೆ ಅದೇ ರಸ್ತೆ ಮೇಲೆ ತಿರುಗಾಡುವ ಕನ್ನಡಪರ ಸಂಘಟನೆಗಳವರು, ಸಾಹಿತಿಗಳು, ಜನಪ್ರತಿನಿಧಿಗಳಿಗೆ ಯಾರೊಬ್ಬರಿಗೂ ಏನು ಅನ್ನಿಸಿಲ್ಲ ಎಂದೆನಿಸುತ್ತದೆ. ಇನ್ನಾದರೂ ಕನ್ನಡಪರ ಸಂಘಟನೆಗಳಾಗಲಿ, ಸ್ಥಳೀಯ ಆಡಳಿತವಾಗಲಿ ಕನ್ನಡ ಬಾವುಟದ ದುಸ್ಥಿತಿ ನಿವಾರಿಸುವ ಕಾರ್ಯಕ್ಕೆ ಮುಂದಾಗುವರೇ ಕಾಯ್ದು ನೋಡಬೇಕು.
Tags #dharwad #india #karnataka #trending #trend #animal #god #Political #nation #kannada #karnataka
[ajax_load_more]Check Also
ರೈತರ ಬೆಳೆಗೆ ಉತ್ತಮ ದರಕ್ಕಾಗಿ ಭೂಮಿ ಆಪ್ ರಚನೆ; ರಘುನಂದನ್
Spread the loveಹುಬ್ಬಳ್ಳಿ ಗ್ರಾಮೀಣ ಭಾಗದ ರೈತರಿಗೆ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ …