ಹುಬ್ಬಳ್ಳಿ: ಶೇ. 40 ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆ ಮಾಡುವುದು,
ಹೊಸ ಪಿಂಚನೆ ಯೋಜನೆ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆ .7 ರಂದು ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್ .ಎಸ್. ಜೈಕುಮಾರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಕಮ್ಮಾರ ಜಂಟಿ ಹೇಳಿಕೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದು
7ನೇ ವೇತನ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರ ಮುಂದೂಡಿಕೆ ಮಾಡಿರುವುದರಿಂದ ವರದಿ ಜಾರಿ ವಿಳಂಬವಾಗುತ್ತಿದೆ, ಸರ್ಕಾರದ ಇಂತಹ ನಿರ್ಲಕ್ಷ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಅಂದಿನ ಧರಣಿಯಲ್ಲಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು ಎಂದು ಮನವಿ ಮಾಡಿದರು.
ಶೇ. 40 ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸಬೇಕು ರಾಜ್ಯದ ಎಲ್ಲಾ ನೌಕರರಿಗೂ ಪಿಎಫ್ಆರ್‌ಡಿಎ ಕಾಯ್ದೆ ಹಾಗೂ ಹೊಸ ಪಿಂಚಣಿ ಪದ್ದತಿ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು,ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕು.
ಗುತ್ತಿಗೆ,ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು,ಇವರ ವೇತನವನ್ನು ಸರ್ಕಾರದಿಂದ ನೇರವಾಗಿ ಖಾತೆಗೆ ಜಮಾ ಮಾಡುವುದು. ಅಲ್ಲದೆ ನೇರ ನೇಮಕಾತಿಗಳಲ್ಲಿ ಖಾಯಂಗೊಳಿಸ ಬೇಕು ಎಂದು ಒತ್ತಾಯಿಸಿದರು.
ಇನ್ನು ಮುಂದೆ ಗುತ್ತಿಗೆ,ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳಲು ಮುಂದಾಗಬೇಕು, ಕೋವಿಡ್ ನೆಪದಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು,ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರ ಪರಿಷ್ಕರಣೆ ಮಾಡಿ, ಜೇಷ್ಠತಾ ಪಟ್ಟಿ ಸಿದ್ಧಪಡಿ ನಿಯಮಾನುಸಾರ ಪದೋನ್ನತಿ ನೀಡಲು ಸರ್ಕಾರ ಮುಂದಾಗಬೇಕು,ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆಗಳ ವಿಲೀನ,ನೌಕರರ ಸಂಖ್ಯೆ ಕಡಿತ, ಸಾರ್ವಜನಿಕ ಉದ್ದಿಮೆ,ಸರ್ಕಾರದ ಯೋಜನೆಗಳ ಖಾಸಗೀಕರಣ, ಹೊರಗುತ್ತಿಗೆ ನೇಮಕಾತಿ ಪ್ರಸ್ತಾವನೆಗಳನ್ನು ಕೈಬಿಡ ಬೇಕು,ಬಡ್ತಿ ಮೀಸಲಾತಿ ಕಾಯ್ದೆ ಸಂಪೂರ್ಣ ಅನುಷ್ಠಾನಗೊಂಡು ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಬೇಕು,ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲುತಜ್ಞರ ಸಮಿತಿ ನೇಮಕ ಮಾಡಲು ಮುಂದಾಗಬೇಕು,ಎಲ್ಲಾ ನೌಕರರಿಗೂ ಹಾಗೂ ಎಲ್ಲಾ ನಿವೃತ್ತರಿಗೂ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಬೇಕು,ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟಲು ಮುಂದಾಗಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.