ಹುಬ್ಬಳ್ಳಿ: ಅಂಗವಿಕಲರು ಸಮರ್ಥರಾಗಿದ್ದು, ಸಮಾಜಕ್ಕೆ ದಾರಿದೀಪಾಗಿದ್ದಾರೆ. ಎಲ್ಲವೂ ಇದ್ದವರು ಮಾತ್ರ ಸಮರ್ಥರಾಗಿರುತ್ತಾರೆ ಎನ್ನುವ ಭಾವ ತಪ್ಪು ಎಂದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ಹೇಳಿದರು.
ನಗರದ ಹೊಸೂರಿನ ಕನ್ನಡ ವೈಶ್ಯ ಸಮಾಜ ಸಭಾಂಗಣದಲ್ಲಿ ಸಕ್ಷಮ ಉತ್ತರ ಕರ್ನಾಟಕ ಪ್ರಾಂತ್ ಹಮ್ಮಿಕೊಂಡಿದ್ದ ‘ಸಕ್ಷಮ್ ಉತ್ತರ ಕರ್ನಾಟಕ ಪ್ರಾಂತ್ ಅಧಿವೇಶನ’ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಎಂದಿಗೂ ಅವರನ್ನು ಹೊರೆಯೆಂದು ಭಾವಿಸಬಾರದು. ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ. ಕೈ ಇದ್ದವರಿಗೆ ಕಾಲು ಇರಲ್ಲ, ಕಾಲು ಇದ್ದವರಿಗೆ ಕಣ್ಣು ಇರಲ್ಲ. ಕೈ–ಕಾಲು ಇದ್ದವರಿಗೆ ಮಾತನಾಡಲು ಬರುವುದಿಲ್ಲ. ಇವೆಲ್ಲ ಸರಿ ಇದ್ದವರಿಗೆ ಬುದ್ಧಿಯೇ ಇರುವುದಿಲ್ಲ. ಅಂಗಾಂಗ ವೈಕಲ್ಯದ ಜೊತೆಗೆ ಬುದ್ಧಿಭ್ರಮಣೆಯೂ ಇರುತ್ತದೆ. ಹುಟ್ಟು ದೈವಿಚ್ಛೆ. ಭಗವಂತನ ನೀಡಿದ ಬದುಕನ್ನೇ ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಳ್ಳಬೇಕು. ಎಲ್ಲ ಸರಿ ಇದ್ದವರು ಸಾಧಿಸಲಾಗದ್ದನ್ನು, ಸರಿಯಿಲ್ಲದವರು ಸಾಧಿಸುತ್ತಾರೆ. ಅದುನಿಮ್ಮ ತಾಕತ್ತು ಎಂದರು.
‘ಅಂಗವಿಕಲರ ಸಮಸ್ಯೆಗಳು ಯಾವುವು? ಬೇಡಿಕೆಗಳು ಏನು? ಎನ್ನುವ ಪಟ್ಟಿ ಸಿದ್ಧಪಡಿಸಿ. ನಿಮ್ಮ ಜೊತೆ ಐದು–ಆರು ಮಂದಿ ಶಾಸಕರು ಸೇರಿ ಆ ಕುರಿತು ಚರ್ಚಿಸುತ್ತೇವೆ. ನಂತರ ರಾಜ್ಯಪಾಲರನ್ನು, ಮುಖ್ಯಮಂತ್ರಿಯನ್ನು ಭೇಟಿಯಾಗಿ ಸರ್ಕಾರದ ಕಣ್ಣು ತೆರಿಸೋಣ. ದೊರೆಯಬೇಕಾದ ಸೌಲಭ್ಯ ಪಡೆಯಲು ಪ್ರಯತ್ನಿಸೋಣ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಕ್ಷಮ್ ಅಧ್ಯಕ್ಷ ಎಸ್.ಜಿ. ಶೆಟ್ಟಿ, ‘ಏಕ ಗವಾಕ್ಷಿ ಪದ್ಧತಿಯಲ್ಲಿ ಅಂಗವಿಕಲರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅನುವು ಮಾಡಿಕೊಡಬೇಕು. ಶಿಕ್ಷಣ, ವೈದ್ಯಕೀಯ, ಉದ್ಯೋಗ, ಬಡತನ ನಿವಾರಣೆ, ತರಬೇತಿ ಕಾರ್ಯಕ್ರಮಗಳ ಮಾಹಿತಿ ಸಹ ಅದರಲ್ಲಿಯೇ ದೊರೆಯುವಂತಾಗಬೇಕು. ಅಂಗವಿಕಲರ ಅಂಕಿ–ಸಂಖ್ಯೆಗಳು ಹಾಗೂ ಶಿಕ್ಷಣ, ಆರ್ಥಿಕ ಸ್ಥಿತಿ, ಉದ್ಯೋಗದ ಮಾಹಿತಿಗಳು ಪ್ರತಿ ಜಿಲ್ಲೆಯಲ್ಲಿ ಸುಲಭವಾಗಿ ದೊರೆಯುವಂತಾಗಬೇಕು. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಪಂಚಾಯಿತಿಯಿಂದ ಲೋಕಸಭೆವರೆಗೂ ಸ್ಪರ್ಧಿಸಲು ಅಂಗವಿಕಲರಿಗೆ ಮೀಸಲಾತಿ ಒದಗಿಸಬೇಕು’ ಎಂದು ಆಗ್ರಹಿಸಿದರು.
ಡಾ. ಸುಭಾಸ ಬೊಬ್ರುವಾಡ, ಸಕ್ಷಮ್ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. ಸಕ್ಷಮ್ ರಾಷ್ಟ್ರೀಯ ಅಧ್ಯಕ್ಷ ಗೋವಿಂದರಾಜ್, ಶ್ರೀಧರ ನಾಡಗೇರ, ಮುರುಳಿಕೃಷ್ಣ, ಪ್ರಸನ್ನ ಶೆಟ್ಟಿ, ನಾಗಲಿಂಗ ಮುರುಗಿ, ಡಾ. ಸುನೀಲ ಗೋಗಿ, ಅರವಿಂದರಾವ್ ದೇಶಪಾಂಡೆ ಪಾಲ್ಗೊಂಡಿದ್ದರು.