ಹುಬ್ಬಳ್ಳಿ: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಹಲ್ಲೆ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದು, ನ್ಯಾಯ ದಕ್ಕಿಸಿಕೊಡುವಂತೆ ಸಚಿವರೆದುರು ಮೊರೆ ಇಟ್ಟರು.
ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದು, ನಮ್ಮ ಮೇಲೆ ಗಲಾಟೆ ಮಾಡಿದವರ ಮುಖಚರ್ಯೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆ ಎಂದು ಸಚಿವರೆದುರು ಹೇಳಿದರು.
ನಮಗೆ ಆದಂತೆ ಬೇರೆ ಯಾರಿಗೂ ಆಗಬಾರದು. ಹಾಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಭರವಸೆಯಿದೆ ಎಂದು ಹರ್ಷಿಕಾ ಪೂಣಚ್ಚ ಈ ವೇಳೆ ಮಾದ್ಯಮಗಳಿಗೆ ತಿಳಿಸಿದರು.