ಹುಬ್ಬಳ್ಳಿ; ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಇಂದಿಲ್ಲಿ ಗಂಭೀರ ಆರೋಪ ಮಾಡಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹತ್ಯೆ ಆರೋಪಿಯನ್ನು ಬಂಧಿಸಿದ ಪೊಲೀಸರ ಬಳಿ ಆತನ ಮೊಬೈಲ್ ಫೋನ್ ಇದ್ದು ಅದರಲ್ಲಿದ್ದ ಚಿತ್ರಗಳು ಅದು ಹೇಗೆ ಜಾಲತಾಣದಲ್ಲಿ ಪ್ರಸಾರಗೊಂಡವು ಎಂಬುದರ ಬಗ್ಗೆ ಸರ್ಕಾರವು ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರವು ಈ ಘಟನೆ ಕುರಿತು ನಡೆದಿರುವ ಬೆಳವಣಿಗೆಗಳ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯಬೇಕು. ಅವಸರದಲ್ಲಿ ಬಿ ರಿಪೋರ್ಟ್ ಹಾಕುವುದು ಬೇಡ ಎಂದರು.
ಆರೋಪಿಯ ಜೊತೆ ಇನ್ನೂ ನಾಲ್ವರು ಇದ್ದಾರೆ ಎನ್ನಲಾಗಿದೆ. ಆ ಬಗ್ಗೆಯೂ ತನಿಖೆ ನಡೆಯಬೇಕು. ಹತ್ಯೆಯನ್ನು ಸಮರ್ಥಿಸಿ ಕೆಲವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅವರಿಗೆ ಎಷ್ಟು ಧೈರ್ಯ ಎಂದು ಶಾಸಕರು ಪ್ರಶ್ನಿಸಿದರು. ಏನೇ ಮಾಡಿದರೂ ತಮ್ಮ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ಆತ್ಮವಿಶ್ವಾಸವು ಆರೋಪಿಗಳಿಗೆ ಇದೆ. ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾರಣ, ಎಂದು ಆರೋಪಿಸಿದರು.
ಪ್ರಕರಣವನ್ನು ಸಿಎಂ, ಡಿಸಿಎಂ ಅಥವಾ ಗೃಹ ಸಚಿವರು ಖಂಡಿಸುತ್ತಿಲ್ಲ, ಹಾಗೆ ಮಾಡಿದರೆ ಚುನಾವಣೆಗಳಲ್ಲಿ ಎಲ್ಲಿ ಅಲ್ಪಸಂಖ್ಯಾತರ ಮತಗಳು ಪಕ್ಷಕ್ಕೆ ಸಿಗುವುದಿಲ್ಲವೋ ಎಂಬ ಅನುಮಾನ ಅವರಿಗಿದೆ ಎಂದರು. ಸಿಎಂ ಲವ್ ಪ್ರಕರಣ ಎನ್ನುತ್ತಾರೆ. ಗೃಹ ಸಚಿವರು ಇದು ಆಕಸ್ಮಿಕ ಘಟನೆ ಎನ್ನುತ್ತಾರೆ. ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಅವರು ಹೀಗೆ ಮಾತನಾಡಬಾರದು, ಇದು ನಾಚಿಕೆಗೇಡಿನ ವಿಷಯ ಎಂದು ಜರಿದರು. ತಮ್ಮದೇ ಪಕ್ಷದ ಪಾಲಿಕೆ ಸದಸ್ಯನ ಮಗಳ ಹತ್ಯೆ ನಡೆದರೂ ಇವರೆಲ್ಲ ಸುಮ್ಮನಿದ್ದಾರೆ. ಆದರೆ ಅರೋಪಿ ಮನೆಗೆ ಪೊಲೀಸ್ ರಕ್ಷಣೆ ಕೊಟ್ಟಿದ್ದಾರೆ. ಇದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಲವ್ ಜಿಹಾದ್ ಪ್ರಕೆರಣಗಳು ಹೆಚ್ಚುತ್ತಿವೆ. ಮತಾಂಧ ಶಕ್ತಿಗಳ ಹಾರಾಟ ಜೋರಾಗಿದೆ ಎಂದ ಅವರು ಹಲವು ಪ್ರಕರಣಗಳನ್ನು ಉದಾಹರಿಸಿದರು.
ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ರಾಜಕೀಯ ಮಾಡಿ ಮತಗಳಿಸುವ ಯಾವ ಅಗತ್ಯವೂ ಬಿಜೆಪಿಗೆ ಇಲ್ಲ ಎಂದು ಇಬ್ಬರೂ ಶಾಸಕರು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿ ಮತಯಾಚಿಸುತ್ತೇವೆ ಎಂದ ಅವರು ಸಮಾಜದಲ್ಲಿ ಹೀಗೆ ದುರ್ಘಟನೆ ಆದಾಗ ಜಾಗೃತಿ ಮೂಡಿಸುವುದು ಪಕ್ಷದ ಕೆಲಸ ಎಂದರು.
ಮುಖಂಡರಾದ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ಗುರು ಪಾಟೀಲ, ಪ್ರಶಾಂತ ಹಾವಣಗಿ ಉಪಸ್ಥಿತರಿದ್ದರು.