ಹುಬ್ಬಳ್ಳಿ: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಅವರ ಭವಿಷ್ಯಕ್ಕೆ ಭದ್ರಬುನಾದಿ ಹಾಕಿದಂತೆ. ಹೀಗಾಗಿ, ಪೋಷಕರು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕು’ ಎಂದು ಬಣಗಾರ ಸಮುದಾಯದ ಕಮಿಟಿ ಸದಸ್ಯ ಷಣ್ಮುಖಪ್ಪ ಹುಲಿ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಬಣಗಾರ ಸಮಾಜ ಆಯೋಜಿಸಿದ್ದ ಕಂಕಣ–2022ರ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ 2021–22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಣಗಾರ ಸಮುದಾಯದವರು ಎಲ್ಲ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ಇರುವುದೇ ಬಣಗಾರ ಸಮಾಜದ ಶಕ್ತಿ. ಸಮುದಾಯದ ಮಕ್ಕಳು ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
‘ಬಡತನ ತೊಲಗಿಸಲು ಶಿಕ್ಷಣವೇ ಹೆದ್ದಾರಿ. ಕೊರೊನಾ ಸೋಂಕಿನ ನಂತರದಲ್ಲಿ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದೆ. ಅಲ್ಲದೇ, ಮಕ್ಕಳು ಕಲಿಕೆಯಿಂದ ಹಿಂದುಳಿದಿದ್ದಾರೆ. ಪೋಷಕರು ಮಕ್ಕಳಿಗೆ ಕಾಳಜಿಯಿಂದ ವಿದ್ಯಾಭ್ಯಾಸ ನೀಡಬೇಕು’ ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯು ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ 110 ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯನಿಧಿಯ ಆಯುಕ್ತ ಟಿ.ಆರ್. ವೀರೇಶ, ಅಖಿಲ ಭಾರತ ಬಣಗಾರ ಸಮಾಜದ ಅಧ್ಯಕ್ಷ ಬಾಳಾಸಾಹೇಬ್ ದೇವನಾಳ, ಸಮಾಜದ ಗೌರವಾಧ್ಯಕ್ಷ ಸುರೇಶ ಚೆನ್ನಿ, ಅಧ್ಯಕ್ಷ ಅನಿಲ ಕವಿಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಜೋಡಳ್ಳಿ, ಕೈಗಾರಿಕೋದ್ಯಮಿ ರಾಚಣ್ಣಸಾರಡಗಿ, ಕಾನೂನು ಸಲಹೆಗಾರ ರಮೇಶ್ ಮನೊರೆ, ಪ್ರಾಚಾರ್ಯ ಟಿ.ಎಫ್. ಸೊರಟೂರು ಇದ್ದರು.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …