ಚುಟುಕು ಸಾಹಿತ್ಯವನ್ನು ಮುದ್ರಿಸಿ ಇತರರೂ ಓದುವಂತೆ ಪ್ರೇರೇಪಿಸಿ-ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ದಶಮಾನೋತ್ಸವ ಸಮಾರಂಭ ಉದ್ಘಾಟನೆ
ಹುಬ್ಬಳ್ಳಿ: ‘ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಗೊಳ್ಳಲು ಚುಟುಕು ಸಾಹಿತ್ಯ ಪ್ರಕಾರದ ಕೊಡುಗೆಯೂ ಇದೆ. ಹಾಗಾಗಿ, ಎಲ್ಲರೂ ಚುಟುಕು ಬರೆಯುವಂತಾಗಬೇಕು‘ ಎಂದು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಮೂರು ಸಾವಿರ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಚುಟುಕು ಸಾಹಿತ್ಯ ಪ್ರಕಾರ ನಶಿಸಬಾರದು. ತಾವು ಬರೆದ ಚುಟುಕುಗಳನ್ನು ಮುದ್ರಿಸಿ ಇತರರೂ ಓದುವಂತೆ ಮಾಡಬೇಕು. ಎಲ್ಲರೂ ಚುಟುಕು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.
ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಚುಟುಕು ಸಾಹಿತ್ಯ ಪರಿಣಾಮಕಾರಿಯಾದ ಪ್ರಕಾರ. ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ಚುಟುಕುಗಳ ಮೂಲಕ ನೀಡಬಹುದು’ ಎಂದು ಹೇಳಿದರು.
ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರ ‘ಮಹಾತ್ಮರ ಚರಿತಾಮೃತ’ ಕೃತಿ ಕುರಿತು ಮಾತನಾಡಿದ ಸಾಹಿತಿ ಪ್ರೊ.ಎಸ್.ವಿ. ಪಟ್ಟಣಶೆಟ್ಟರ, ‘216 ಮಹಾತ್ಮರ ಚರಿತ್ರೆಯನ್ನು ಸ್ವಾಮೀಜಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಎಲ್ಲರೂ ಓದಬೇಕಾದ ಅಮೂಲ್ಯವಾದ ಕೃತಿ’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ, ‘ಚುಟುಕು ಪ್ರಕಾರ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ. ಚುಟುಕು ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಬೇಕಾದ ಅಗತ್ಯ ನೆರವು ನೀಡಲಾಗುವುದು’ ಎಂದು ಹೇಳಿದರು.
ಶಿರಸಿಯ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕರ್ಜಗಿ–ಹಾವೇರಿಯ ಶ್ರೀಗೌರಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುದ್ಧರಾಜ ಯೋಗೀಂದ್ರ ಸ್ವಾಮೀಜಿ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ‘ಚುಟುಕು ತಪಸ್ವಿ’ ಮತ್ತು ಮಕ್ಕಳ ಸಾಹಿತಿ ಪ್ರೊ. ವಿಶಾಲಾಕ್ಷಿ ದೇಶಪಾಂಡೆ ಅವರಿಗೆ ‘ಜಯಶ್ರೀ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಾಯಕರಾದ ವೆಂಕಟೇಶ ಕುಲಕರ್ಣಿ ದಂಪತಿ ಮತ್ತು ರಾಮಚಂದ್ರ ಇಬ್ರಾಹಿಂಪುರ ಅವರಿಗೆ ‘ಚುಟುಕು ಚೇತನ’ ಪ್ರಶಸ್ತಿ ನೀಡಲಾಯಿತು. ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರು ರಚಿಸಿದ ‘ಮಹಾತ್ಮರ ಚರಿತಾಮೃತ’ ಮತ್ತು ಕೃಷ್ಣಮೂರ್ತಿ ಕುಲಕರ್ಣಿ ಅವರ ‘ಕನ್ನಡ ಸವಿಗನ್ನಡ’ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಚನ್ನಬಸಪ್ಪ ಧಾರವಾಡಶೆಟ್ರು, ಶಂಕರ ಕುಂಬಿ, ವಿ.ಜಿ. ಪಾಟೀಲ ಇದ್ದರು. ಪ್ರಲ್ಹಾದ ಗೆಜ್ಜಿ ಸ್ವಾಗತಿಸಿದರು. ಮಾಯಾ ಚಿಕ್ಕೇರೂರು, ಪದ್ಮಜಾ ಉಮರ್ಜಿ ನಿರೂಪಿಸಿದರು.
ಬಸವ ತತ್ವದ ತಳಹದಿಯ ಮೇಲೆ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಮುಂಬೈ, ಕಾಸರಗೋಡು, ಅಕ್ಕಲಕೋಟ, ಗೋವಾದಲ್ಲೂ ಪರಿಷತ್ತಿನ ಶಾಖೆ ತೆರೆಯಲಾಗಿದೆ ಎಂದು ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.