ರಾಜ್ಯಸಭೆ ಚುನಾವಣೆಗೆ ಕ್ಷಣಗಣಗೆ, ಯಾರಿಗೆ ಒಲೆಯಲಿದೆ ಅದೃಷ್ಟ

Spread the love

ಬೆಂಗಳೂರು: ಇಂದು ನಡೆಯಲಿರುವ ರಾಜ್ಯಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 4 ಸ್ಥಾನ ಸೇರಿ 15 ರಾಜ್ಯಗಳಲ್ಲಿ ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಅಖಾಡದಲ್ಲಿದ್ದು, ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ನಾಲ್ಕನೇ ಸೀಟು ಜಿದ್ದಾಜಿದ್ದಿನಿಂದ ಕೂಡಿದೆ. ಆದರೆ, ಮೂರು ಪಕ್ಷಗಳಿಗೆ ಸಿಂಧು – ಅಸಿಂಧು ಮತಗಳದ್ದೇ ಭೀತಿ ಶುರುವಾಗಿದೆ.
ಚುನಾವಣೆಯಲ್ಲಿ ಮತದಾನವನ್ನು ಕ್ರಮ ಪ್ರಕಾರವಾಗಿ ಮಾಡಬೇಕು. ಮತ ಹಾಕುವ ಸಂದರ್ಭ ಎಡವಟ್ಟು ಮಾಡಿದರೆ ಚುನಾವಣಾ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆ ಹೆಚ್ಚು.‌ ಹಾಗಾಗಿ ಶಾಸಕರು ತಮ್ಮ ಮತವನ್ನು ಎಚ್ಚರಿಕೆಯಿಂದ ಕ್ರಮ ಪ್ರಕಾರವಾಗಿ ಹಾಕಬೇಕು. ಇಲ್ಲವಾದರೆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಅಸಿಂಧು ಮತ ಬಿದ್ದರೆ ಅಭ್ಯರ್ಥಿಯ ಗೆಲುವಿನ‌ ಲೆಕ್ಕಾಚಾರ ತಲೆಕೆಳಗಾಗುತ್ತದೆ.ಇಂದು ಮತದಾನದ ಗಂಟೆಯ ಬಳಿಕ ಮತ ಎಣಿಕೆ ಶುರುವಾಗಲಿದ್ದು, ಫಲಿತಾಂಶ ಕೂಡ ಹೊರಬರಲಿದೆ. ಇನ್ನು ಈ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಕೂಡ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಸಾಧ್ಯತೆ ಇದೆ.
ಕಣದಲ್ಲಿ ಯಾರು?: ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನಟ ಜಗ್ಗೇಶ್‌, ಕಾಂಗ್ರೆಸ್​ನಿಂದ ಜೈರಾಂ ರಮೇಶ್‌ ಗೆಲ್ಲುವುದು ಖಚಿತ. ಇನ್ನು ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಲೇಹರ್‌ ಸಿಂಗ್‌ ಸಿರೋಯಾ, ಕಾಂಗ್ರೆಸ್‌ನಿಂದ ಮನ್ಸೂರ್‌ ಖಾನ್‌ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಈ ಮೂವರಲ್ಲಿ ಕೊನೆ ಗಳಿಗೆಯಲ್ಲಿ ಯಾರಿಗೆ ಜಯ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ..
ಕೈ-ದಳ ಹಗ್ಗಜಗ್ಗಾಟ: ಕೋಮುವಾದಿ ಬಿಜೆಪಿಯನ್ನು ಸೋಲಿಸಲು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 32 ಮತಗಳನ್ನು ಹೊಂದಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉದ್ಯಮಿಯಾಗಿದ್ದಾರೆ. ಅಪಾರ ಅನುಭವ ಹೊಂದಿರುವ ಅವರಿಗೆ ಬೆಂಬಲ ನೀಡುವ ಅನಿವಾ ರ್ಯತೆಯೇನು ಎಂಬುದನ್ನು ಸುರ್ಜೇವಾಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಹೆಚ್​​ಡಿಕೆ ಟ್ವೀಟ್​ ಮಾಡಿದ್ದಾರೆ.
ಇತ್ತ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಜೆಡಿಎಸ್ ಬುಟ್ಟಿಗೆ ಕೈ ಹಾಕಿದ್ದಾರೆ. ಇವತ್ತು ಕೋಮುವಾದ ಮತ್ತು ಜಾತ್ಯತೀತತೆಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವಿಗೆ ಮತ ನೀಡುವಂತೆ ಬಹಿರಂಗ ಪತ್ರದ ಮೂಲಕ ಜೆಡಿಎಸ್ ಶಾಸಕರಿಗೆ ಮನವಿ ಮಾಡಿದ್ದಾರೆ.ರಾಜ್ಯಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಚುನಾವಣೆ ಕಾರಣ ಹಲವು ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿದೆ .


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!