ಕೋವಿಡ್ ಆರೈಕೆ ಸೆಂಟರ್ನಲ್ಲಿ ಶಾಸಕ ರೇಣುಕಾಚಾರ್ಯರಿಂದ ಹೋಮ, ಹವನ
ದಾವಣಗೆರೆ: ಅರಬಗಟ್ಟೆಯ ಕೋವಿಡ್ ಆರೈಕೆ ಸೆಂಟರ್ನಲ್ಲಿ ಶಾಸಕ ರೇಣುಕಾಚಾರ್ಯ ಹೋಮ, ಹವನ ಮಾಡಿದ್ದಕ್ಕೆ ಶಾಸಕರ ವಿರುದ್ದ ಪ್ರಕರಣ ದಾಖಲಿಸಲು ತಹಸೀಲ್ದಾರ್ ಮುಂದಾದ ಬೆನ್ನಲ್ಲೇ ತಾಲೂಕು ಆಡಳಿತದ ವಿರುದ್ಧ ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರಿಂದ ವಿರೋಧ ವ್ಯಕ್ತವಾಗಿದೆ.
ಸೋಂಕಿತರು ತಹಸೀಲ್ದಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕರ ಶಾಂತನಗೌಡರ ಕುಮ್ಮಕ್ಕಿನಿಂದ ತಹಸೀಲ್ದಾರ್ ಅವರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಶಾಸಕ ರೇಣುಕಾಚಾರ್ಯ ಇಲ್ಲದೇ ಇದ್ದಾಗ ಕೋವಿಡ್ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆಯೂ ಇರುವುದಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಬರುವವರೆಗೂ ಊಟ ಮಾಡುವುದಿಲ್ಲ ಎಂದು ಸೋಂಕಿತರು ಪಟ್ಟು ಹಿಡಿದಿದ್ದರು.
ಈ ನಡುವೆ ತಹಶಿಲ್ದಾರ ತಡರಾತ್ರಿಗೆ ಭೇಟಿ ನೀಡಿದ್ದು ಈ ವೇಳೆ ರೇಣುಕಾಚಾರ್ಯ ತಹಶಿಲ್ದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.