ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಒಂದೇ ದಿನ ಬೇರೆ ಬೇರೆ ಕಡೆ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತ ದೇಹ ಪತ್ತೆಯಾಗಿವೆ.
ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ನಾಲೆಯಲ್ಲಿ 30 ರಿಂದ 35 ವರ್ಷ ಪ್ರಾಯದ ಮಹಿಳೆಯ ಶವ ಅರ್ಧ ಕತ್ತರಿಸಿದ ರೂಪದಲ್ಲಿ ಪತ್ತೆಯಾಗಿದೆ. ಮತ್ತೊಂದು ಮಹಿಳೆಯ ಶವ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿದೆ. ಪತ್ತೆಯಾದ ಎರಡೂ ಶವಗಳ ಅರ್ಧಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ಎರಡು ಕಾಲುಗಳನ್ನು ಕಟ್ಟಿ ನೀರಿಗೆ ಬಿಸಾಡಿದ್ದಾರೆ.
ಇನ್ನು ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಸುದ್ದಿ ತಿಳಿದು ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆ ಸಿಕ್ಕಿರುವ ಅರ್ಧ ಕತ್ತರಿಸಿದ ಮೃತ ದೇಹಗಳ ಹೊಟ್ಟೆಯಿಂದ ಕೆಳಗಿನ ಭಾಗ ಮಾತ್ರ ಪತ್ತೆಯಾಗಿದೆ. ಉಳಿದ ಭಾಗ ಇನ್ನೂ ಸಿಕ್ಕಿಲ್ಲ.
ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.