ಬಾಗಲಕೋಟೆ : ದಾಖಲೆಯ ಮೊತ್ತಕ್ಕೆ ರೈತನ ಮಿತ್ರ ಭಲೆ ಬಸವ ಮಾರಾಟವಾಗಿದ್ದಾನೆ. ತೆರೆದ ಬಂಡಿ ಎತ್ತಿನ ಸ್ಪರ್ಧೆಯ ಸದಾ ವಿಜೇತವಾಗುತ್ತಿದ್ದ ಎತ್ತು ದಾಖಲೆಯ 11.50 ಲಕ್ಷ ರೂಪಾಯಿಗೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಜೋಪಾನವಾಗಿ ಸಾಕಿದ್ದ ಎತ್ತು ಸ್ಪರ್ಧೆಯಲ್ಲಿ ಯಾವತ್ತೂ ಗೆಲುವನ್ನು ಸಾಧಿಸುತ್ತಿತ್ತು. ಸಹೋದರರು ಪ್ರೀತಿಯಿಂದ ಈ ಬಸವನಿಗೆ ಸೂರ್ಯ ಅಂತ ನಾಮಕರಣ ಮಾಡಿದ್ದರು. ಕಿಲಾರಿ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.
ವಿಜಯಪುರ ಜಿಲ್ಲೆ ಹೊರ್ತಿ ಜಾತ್ರೆಯಲ್ಲಿ ಮೂರು ವರ್ಷದ ಸೂರ್ಯನನ್ನು 45 ಸಾವಿರ ರೂಪಾಯಿಗೆ ಖರೀದಿಸಿ ತರಲಾಗಿತ್ತು.
ಇದೀಗ 9 ವರ್ಷದ ಈ ಸೂರ್ಯನನ್ನು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಂಗೆ ಅವರು 11 ಲಕ್ಷ 50 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಸೂರ್ಯ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸುತ್ತಮುತ್ತಲಿನ ಯಾವುದೇ ಜಿಲ್ಲೆಯಲ್ಲೂ ಸ್ಪರ್ಧೆ ನಡೆದರೆ ಸೂರ್ಯನಿಗೆ ಅಲ್ಲಿ ಬಹುಮಾನ ಫಿಕ್ಸ್ ಇರುತ್ತಿತ್ತು. ಮೂರು ವರ್ಷಗಳಲ್ಲಿ ಅಂದಾಜು 8 ಲಕ್ಷ ರೂ. ಬೈಕ್, ಚಿನ್ನ, ಬೆಳ್ಳಿ, ನಗದು ಹಣ ಗೆದ್ದು ತಂದಿರುವ ಭಲೇ ಬಸವ ಇದಾಗಿದೆ. ಇದೀಗ ಕಿಲಾರಿ ಎತ್ತು ಸೂರ್ಯ 11.50 ಲಕ್ಷಕ್ಕೆ ಮಾರಾಟವಾದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಚಿಮ್ಮಡ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಪ್ರೀತಿಯ ಸೂರ್ಯನ ಗ್ರಾಮಸ್ಥರು ಬೀಳ್ಕೊಟ್ಟರು.
ಗ್ರಾಮದಲ್ಲಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಸ್ವಾಮೀಜಿಯವರು ಭಾಗಿಯಾಗಿ ಸೂರ್ಯನಿಗೆ ಗೌರವ ಸಲ್ಲಿಸಿದರು.