ಬೆಂಗಳೂರು : ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತಲೆದೋರಿರುವ ಧರ್ಮ ದಂಗಲ್‌ಗೆ ತೆರೆ ಎಳೆಯಲು ಹೈಕಮಾಂಡ್ ಮುಂದಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಬಿಜೆಪಿ ಹೈಕಮಾಂಡ್ ವಾರ್ನಿಂಗ್ ನೀಡಿದೆ.
ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬಳಿಕ ರಾಷ್ಟ್ರೀಯ ಬಿಜೆಪಿ ಅಲರ್ಟ್ ಆಗಿದೆ. ಧರ್ಮ ದಂಗಲ್‌ಗೆ ತೆರೆ ಎಳೆಯಲು ಬಿಜೆಪಿಯಲ್ಲಿ ಪ್ರಯತ್ನ ನಡೆದಿದೆ. ನೂಪುರ್ ಶರ್ಮಾ ಉಚ್ಚಾಟನೆ ಮೂಲಕ ರಾಜ್ಯಗಳ ಬಿಜೆಪಿ ಘಟಕಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆ ಮೂಲಕ ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೈಕಮಾಂಡ್ ವಾರ್ನಿಂಗ್ ನೀಡಿದೆ.
ಧರ್ಮ ದಂಗಲ್ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸದಂತೆ ತಾಕೀತು ಮಾಡಿದೆ. ಮಸೀದಿ ಗಲಾಟೆ ಸೇರಿ ಇತರೆ ಧರ್ಮ ಸೂಕ್ಷ್ಮ ವಿಚಾರಗಳ ಕುರಿತು ಮಾತನಾಡದಂತೆ ಹೈಕಮಾಂಡ್ ನಿರ್ದೇಶನ ನೀಡಿದೆ.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ನಿಲುವಿಗೆ ಧರ್ಮ ದಂಗಲ್ ಅಡ್ಡಿಯಾಗಿದೆ. ಇನ್ಮುಂದೆ ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ಪಕ್ಷದ ಮುಖಂಡರು, ವಕ್ತಾರರು ಹೇಳಿಕೆಗಳನ್ನು ಕೊಡಬಾರದು. ಕೆಲವು ಪ್ರಕರಣಗಳಲ್ಲಿ ಹೇಳಿಕೆ, ಅಭಿಪ್ರಾಯ ಕೊಡಲೇಬೇಕಾದ ಅನಿವಾರ್ಯತೆ ಇದ್ದರೆ ಅದರ ಬಗ್ಗೆ ಮೊದಲೇ ಗಮನಕ್ಕೆ ತಂದು ಅನುಮತಿ ಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದೆ.