ಹುಬ್ಬಳ್ಳಿ: ನಗರದ ಬಂಕಾಪುರ ಚೌಕದಲ್ಲಿರುವ ಶ್ರೀಶೈಲ ಮಠದಲ್ಲಿ ಇಂದು ಸಂಜೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಆಯೋಜಿಸಿದ್ದ “ವಿದ್ಯಾರ್ಥಿ ಮಿತ್ರ ನಿಮ್ಮ ರಜತ” ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ 60,000 ನೋಟ್‌ಬುಕ್ ವಿತರಿಸುವ ಕಾರ್ಯಕ್ರಮಕ್ಕೆ ಪುಸ್ತಕ ಅನಾವರಣೆ ಮಾಡುವ ಮೂಲ ಚಾಲನೆ ನೀಡಲಾಯಿತು.
ಸಾನ್ನಿಧ್ಯವಹಿಸಿದ್ದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಶ್ರೀಶೈಲಂ ಚಾಲನೆ ನೀಡಿ ಆಶೀರ್ವಚನ ನೀಡಿ.
ವಿದ್ಯಾದಾನ ಶ್ರೇಷ್ಠ ದಾನ. ವಿದ್ಯಾರ್ಥಿಗಳಿಗೆ ಬೋಧನೆ ಮೂಲಕವಷ್ಟೇ ವಿದ್ಯೆಯನ್ನು ದಾನ ಮಾಡಲು ಸಾಧ್ಯ ಎಂಬುದಲ್ಲ. ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾಗುವ ಪಠ್ಯಪುಸ್ತಕ, ನೋಟ್‌ಬುಕ್ ಸೇರಿದಂತೆ ಮತ್ತಿತರ ಸಲಕರಣೆಗಳನ್ನು ಪೂರೈಸುವುದು ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ಈ ದಿಸೆಯಲ್ಲಿ ಬಡ ಮಕ್ಕಳು ಎಲ್ಲ ವಿದ್ಯಾರ್ಥಿಗಳಂತೆ ಕಲಿಕೆಯಲು ಮುಂದುವರೆಯಬೇಕೆಂಬ ಏಕೈಕ ಉದ್ದೇಶದಿಂದ ರಜತ ಉಳ್ಳಾಗಡ್ಡಿಮಠ ಅವರು ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಅನುಕರಣಿಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ನೇತೃತ್ವವಹಿಸಿದ್ದ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಇಂದು ಶಿಕ್ಷಣ ಎಂಬುದು ಉಳ್ಳವರ ಸ್ವತ್ತು ಎಂಬಂತಾಗಿದೆ. ಶಿಕ್ಷಣ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಲಭಿಸಬೇಕೆಂಬ ಮಹದಾಸೆ ತಮ್ಮ ತಂದೆ ದಿ. ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಹೊಂದುವ ಮೂಲಕ ಕಾರ್ಯೋನ್ಮುಖರಾಗಿದ್ದರು ಎಂದು ತಂದೆಯವರ ಸಾಮಾಜಿಕ ಕಾರ್ಯ ನೆನೆದು ಆನಂದ ಭಾಷ್ಪ ಸುರಿಸಿದರು.
ತಮ್ಮ ತಂದೆಯವರ ಸತ್ಕಾರ ಮುಂದುವರೆಸುವದಲ್ಲದೇ, ಕಡುಬಡವ, ಬಡವ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಂತಾಗಲು ತಮ್ಮ ಕೈಯಿಂದಾದ ಸಹಾಯ ಹಸ್ತವನ್ನು ತಾವು ಚಾಚುತ್ತ ನಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕೈಗೊಳ್ಳುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದರು.
ನಾಳೆಯಿಂದ ಜೂ. 7 ರಿಂದ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆ, ಪ್ರೌಢ ಶಾಲೆಗಳಿಗೆ ತೆರಳಿ 1ನೇ ತರಗತಿಯಿಂದ 10ನೇ ತರಗತಿಯ ಬಡ ವಿದ್ಯಾರ್ಥಿಗಳಿಗೆ 60 ಸಾವಿರ ನೋಟ್‌ಬುಕ್‌ಗಳನ್ನು ವಿತರಿಸಲಾಗವುದೆಂದರು.
ಶ್ರೀ ಮೈದೀರೆಶೈವ ಸದ್ಭೋದನಾ ಸಂಸ್ಥೆ ಹುಬ್ಬಳ್ಳಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಅಧ್ಯಕ್ಷತೆವಹಿಸಿದ್ದರು. ಪಾಲಿಕೆ ಸದಸ್ಯರಾದ ಪ್ರಕಾಶ್ ಕುರಟ್ಟಿ, ಸುವರ್ಣ ಕಲ್ಲಕುಂಟ್ಲ, ಇಕ್ಬಾಲ್ ನವಲೂರು, ಸಂದಿಲ್ ಕುಮಾರ, ಮಾಜಿ ಮಹಾಪೌರರಾದ ಪ್ರಕಾಶ್ ಕ್ಯಾರಕಟ್ಟಿ , ಮಾಜಿ ಪಾಲಿಕೆ ಸದಸ್ಯರಾದ ಹೂವಪ್ಪ ದಾಯೋಗೋಡಿ,ಮೋಹನ ಹಿರೇಮನಿ ಸರೋಜಾ ಹೂಗಾರ ಕಾಂಗ್ರೆಸ್ ಮುಖಂಡರಾದ ಗೋಪಾಲ ಎಣಚವಂಡಿ, ಅಜೀಜ್ ಮುಲ್ಲಾ, ಗಂಗಾಧರ ದೊಡವಾಡ, ಮಂಜು ಉಳ್ಳಾಗಡ್ಡಿ ಮತ್ತು ಅನೇಕರು ಉಪಸ್ಥಿತರಿದ್ದರು