ಮಂಗಳೂರು : ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಹಿಜಾಬ್ ಬಗ್ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ನೋಡಲಿ, ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಖಾದರ್, ಹಿಜಾಬ್ ಗಾಗಿ ಹಠ ಹಿಡಿದವರು ಕಾನೂನಿನ ವಿರುದ್ಧ ಮಾತನಾಡುವವರು ಇಲ್ಲಿನ ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕು, ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಕರೆಯೋದು ಎಲ್ಲವನ್ನೂ ಮಾಡಬಹುದು, ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ ಇಲ್ಲಿ ಹುಲಿಯ ಹಾಗೆ ಇದ್ದವರು, ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿದೇಶಕ್ಕೆ ಹೋದರೆ ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ, ಇಲ್ಲಿ ಸಿಗುವ ಲಿಬರ್ಟಿಯ ಅರಿವು ಆಗುತ್ತದೆ. ಶಿಕ್ಷಣದ ಎದುರು ಧರ್ಮಗಳು ಎನ್ನುವುದು ಇರುವುದಿಲ್ಲ. ಶಿಕ್ಷಣದ ಮೂಲಕ ಭವಿಷ್ಯ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಮಕ್ಕಳು ದಾರಿ ತಪ್ಪದಂತೆ ಹೆತ್ತವರು ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.