ಹುಬ್ಬಳ್ಳಿ: ‘ಶಿಕ್ಷಣ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಹೋರಾಟಗಳ ಮೂಲಕ, ಶಿಕ್ಷಕರು ಹಾಗೂ ಶಿಕ್ಷಣದ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಹೊರಟ್ಟಿ, ಈ ಬಾರಿ ಐತಿಹಾಸಿಕ ವಿಜಯ ಸಾಧಿಸಲಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮೂರು ಸಾವಿರ ಮಠದ ಮಹಿಳಾ ಮಹಾವಿದ್ಯಾಲಯ ಹಾಗೂ ವಿಜಯನಗರದ ಸಿಟಿ ಹೈಸ್ಕೂಲಿನಲ್ಲಿ ಶನಿವಾರ ಜರುಗಿದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಪ್ರಚಾರ ನಡೆಸಿದ ಅವರು, ‘ಏಳು ಬಾರಿ ಪರಿಷತ್ ಸದಸ್ಯರಾಗಿರುವ ಹೊರಟ್ಟಿ ಶಿಕ್ಷಣ ಸಚಿವರಾಗಿ ಮತ್ತು ಸಭಾಪತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಶಿಕ್ಷಕ ಸಮುದಾಯದ ಆಶಾಕಿರಣವಾಗಿದ್ದಾರೆ. ವರ ಗೆಲುವಿನ ಓಟಕ್ಕೆ ನಾವೆಲ್ಲರೂ ಬೆಂಬಲಿಸಬೇಕು’ ಎಂದರು.
ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ‘ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ನನನ್ನು ಶಿಕ್ಷಕರು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಇದುವರೆಗೆ ಬೆಂಬಲಿಸಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರವನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ನಾನು ಬಿಜೆಪಿ ಸೇರಿರುವುದರಿಂದ ಯಾವುದೇ ಸಮಸ್ಯೆ ಹಾಗೂ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನನಗೆ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘ಶಿಕ್ಷಕರ ಕಲ್ಯಾಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹೊರಟ್ಟಿ ಅವರನ್ನು ಎಂಟನೇ ಬಾರಿಯೂ ಗೆಲ್ಲಿಸಿ, ದಾಖಲೆ ನಿರ್ಮಿಸಲು ಶಿಕ್ಷಕರು ಬೆಂಬಲ ನೀಡಬೇಕು’ ಎಂದರು. ವಿಜಯನಗರ ಸಿಟಿ ಹೈಸ್ಕೂಲ್ ಮುಖ್ಯ ಗುರುಮಾತೆ ಶ್ರೀಮತಿ ಜೋಶಿ, ಶಿಕ್ಷಕರಾದ ಪೂಜಾರ, ಶೋಭಾ ಗೋಧಿ, ಮಹಿಳಾ ಕಾಲೇಜಿನ
ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಮಾತತಾಡಿದರು. ಮಠದ ವಿದ್ಯಾಸಂಸ್ಥೆಗಳ ಶಾಲೆಗಳ ಶಿಕ್ಷಕರು ಹಾಗೂ ಪ್ರಾಧ್ಯಾಪಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಿಯು ಕಾಲೇಜಿನ ಪ್ರಾಚಾರ್ಯೆ ಅನುರಾಧಾ ಹೊಸಕೋಟಿ, ಬಿ.ಎಂ. ಸಾಲಿಮಠ, ಅಂಜಲಿ ಕರಬಸಣ್ಣವರ, ಆರ್.ಜಿ. ಮರಿಬಾಶೆಟ್ಟಿ, ಎಸ್.ಎಸ್. ಮಠದ, ವಿಕಾಸ ರಬಕವಿಮಠ, ಜಯಾ ಅಂಗಡಿ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿಕ್ಷಕ ಸಂಘಟನೆಗಳ ಪ್ರಮುಖರಾದ ವಿ.ಎಸ್. ಹುದ್ದಾರ, ಎಸ್.ವಿ. ಪಟ್ಟಣಶೆಟ್ಟಿ, ರವಿ ಕೊಣ್ಣೂರ, ಎಸ್.ಬಿ. ಹಿರೇಮಠ, ಶಿರಿಲ್ ಸುಧಾಕರ, ಎನ್.ಎಫ್. ತುಕ್ಕಣ್ಣವರ, ಬಿ.ಎಸ್. ಗೌಡರ, ಎನ್.ವಿ. ದೇಶನೂರ, ಮುತ್ತುರಾಜ ಮತ್ತಿಕೊಪ್ಪ ಇದ್ದರು.
