ಬೆಂಗಳೂರು : ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದ ಅಣ್ಣಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕರ್ನಾಟಕದೊಂದಿಗೆ ಉತ್ತಮ ನಂಟು ಹೊಂದಿರುವ ಅಣ್ಣಮಲೈ ಕನ್ನಡದ ಒಂದು ಸಿನಿಮಾದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ. ಅದೂ ಕೇವಲ ಒಂದು ರುಪಾಯಿ ಸಂಭಾವನೆ ಪಡೆದು ಅಭಿನಯಿಸಿದ್ದಾರೆ.
ಎರಡೂ ಕೈಗಳಿಲ್ಲದ ಯುವಕನೊಬ್ಬ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ನಿಜ ಘಟನೆಯನ್ನು ಆಧರಿಸಿ ಮಾಡಲಾಗಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ನಟಿಸಿದ್ದಾರೆ. ಸಿನಿಮಾದ ಕತೆ, ಸಿನಿಮಾ ಮಾಡುತ್ತಿರುವ ಉದ್ದೇಶ ಅಣ್ಣಮಲೈಗೆ ಬಹಳ ಹಿಡಿಸಿದ ಕಾರಣ ಕೇವಲ ಒಂದು ರುಪಾಯಿ ಸಂಭಾವನೆಯನ್ನು ಪಡೆದಿದ್ದಾರೆ.
ಎಳವೆಯಲ್ಲೇ ನಡೆದ ಅವಘಡದಲ್ಲಿ ಎರಡೂ ಕೈಗಳ ಜೊತೆಗೆ ತಂದೆ-ತಾಯಿಯನ್ನೂ ಕಳೆದುಕೊಂಡ ವಿಶ್ವಾಸ್, ಜೀವನದ ಮೇಲೆ ವಿಶ್ವಾಸ ಕಳೆದುಕೊಳ್ಳದೆ, ಪದವಿ ಮುಗಿಸಿ, ಬಳಿಕ ಡ್ಯಾನ್ಸ್ ಕಲಿತು, ನೃತ್ಯಗಾರನಾಗಿ, ಈಜು ಕಲಿತು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕಾಗಿ ಪದಕಗಳನ್ನು ತಂದ ನಿಜ ಕತೆಯನ್ನು ನಿರ್ದೇಶಕ ರಾಜ್‌ಕುಮಾರ್ ‘ಅರಬ್ಬಿ’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವಿಶ್ವಾಸ್‌ನ ಈಜು ತರಬೇತುಧಾರನ ಪಾತ್ರದಲ್ಲಿ ಮಾಜಿ ಐಪಿಎಸ್ ಅಣ್ಣಮಲೈ ಅಭಿನಯಿಸಿದ್ದಾರೆ.