ಲಖನೌ : ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವ ಮಹಿಳಾ ಕೆಲಸಗಾರರೂ ರಾತ್ರಿ 7ರ ನಂತರ ಮತ್ತು ಬೆಳಿಗ್ಗೆ 6 ಗಂಟೆಗೂ ಮುನ್ನ ಕೆಲಸ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವು ಮಹಿಳಾ ಕೆಲಸಗಾರರ ಸುರಕ್ಷತೆಗೆ ಮಹತ್ವದ ಆದೇಶ ಹೊರಡಿಸಿದೆ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ಫ್ಯಾಕ್ಟರಿಗಳಲ್ಲಿ ಮಹಿಳಾ ಕೆಲಸಗಾರರನ್ನು ರಾತ್ರಿ ಪಾಳಿಗಳಲ್ಲಿ ದುಡಿಸಿಕೊಳ್ಳುವಂತೆ ಇಲ್ಲ ಎಂದು ಆದೇಶಿಸಿದೆ. ಇನ್ನು ಮುಂದೆ ಸಂಜೆ 7ರ ನಂತರ ಮತ್ತು ಬೆಳಿಗ್ಗೆ 6 ಗಂಟೆಗಿಂತ ಮುನ್ನ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ನೌಕರರು ಕೆಲಸ ಮಾಡುವಂತೆ ಇಲ್ಲ. ಹಾಗೆ ಮಾಡಬೇಕಿದ್ದರೆ, ಅದಕ್ಕೆ ಅವರ ಲಿಖಿತ ಬರವಣಿಗೆ ಮುಖೇನ ಒಪ್ಪಿಗೆ ಬೇಕು.
ಈ ಮೇಲೆ ಉಲ್ಲೇಖಿಸಿದ ಅವಧಿಯ ಬಳಿಕವೂ ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ, ಸಂಬಂಧಿತ ಅಧಿಕಾರಿಗಳು ಅವರಿಗೆ ಉಚಿತ ಸಾರಿಗೆ, ಆಹಾರ ಮತ್ತು ಸಾಕಷ್ಟು ಸುರಕ್ಷತೆಯ ಕ್ರಮಗಳನ್ನು ಒದಗಿಸಬೇಕು” ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ.