ವಿಜಯಪುರ : ಬಿಜೆಪಿ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಅವರಂಥ ಕಳ್ಳರ ಅಗತ್ಯವಿಲ್ಲ, ವಿಜಯಪುರ ಜಿಲ್ಲೆಯಲ್ಲೂ ಅಂಥ ಇಬ್ಬರು ಕಳ್ಳರು ಬಿಜೆಪಿ ಸೇರಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಶರಣಾಗಲು ಯಾರು ಹೇಳಿದರು. ಬಿಜೆಪಿ ಪಕ್ಷಕ್ಕೆ ಇಂಥ ಕಳ್ಳರ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಲೂಟಿ ಮಾಡಿರುವ ವಿಜಯಪುರ ಜಿಲ್ಲೆಯಲ್ಲೂ ಇಂಥ ಇಬ್ಬರು ಬಿಜೆಪಿ ಸೇರಲು ನಾಟಕ ನಡೆಸಿದ್ದಾರೆ ಎಂದರು. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಇಡಿ, ಸಿಬಿಐ ಸೇರಿದಂತೆ ಸ್ವತಂತ್ರ ಅಧಿಕಾರ ಇರುವ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧಿನದಲ್ಲಿ ಇರುವುದಿಲ್ಲ. ಹೀಗಾಗಿ ಇಡಿ ದೋಷಾರೋಪ ಸಲ್ಲಿಸಿರುವ ಇಡಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ, ಸ್ವತಂತ್ರ ನಿರ್ವಹಣೆ ಮಾಡುತ್ತವೆ ಎಂದರು.
ಈ ಹಿಂದೆ ಇದೇ ಇಡಿ ವಿಜಯೇಂದ್ರ ಅವರ ಬೆಂಬಲಿಗ ಉಮೇಶ ಕಂಡಕ್ಟರ್ ಎಂಬವರ ವಿರುದ್ಧ ದಾಳಿ ಆಗಿತ್ತು. ಅಲ್ಲದೇ ಕೇಂದ್ರದಲ್ಲಿ ಸಚಿವರಾಗಿದ್ದ ಸಂಸದ ಜಿ.ಎಂ.ಸಿದ್ಧೇಶ್ವರ, ಪ್ರಭಾಕರ ಕೋರೆ ಸೇರಿದಂತೆ ಹಲವರ ವಿರುದ್ಧ ದಾಳಿ ಮಾಡಿದ್ದಾರೆ. ನನ್ನ ವಿರುದ್ಧವೂ ಲೋಪ ಕಂಡು ಬಂದಲ್ಲಿ ದಾಳಿ ಮಾಡಬಹುದು ಎಂದು ಇಡಿ ಕಾರ್ಯವನ್ನು ಶ್ಲಾಘಿಸಿದರು.