ಮೈಸೂರು : ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ದೂರ ಸರಿಸಿದರೆ ಬಿಜೆಪಿಗೆ ತಕ್ಕ ಪಾಠವಾಗಲಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದರು.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಿನ್ನೆ ಮೊನ್ನೆಯಿಂದಷ್ಟೇ ಬಿ.ಎಲ್. ಸಂತೋಷ್ ಕಾಣಿಸಿಕೊಂಡಿದ್ದಾರೆಯೇ ಹೊರತು ಮೊದಲು ಎಲ್ಲಿದ್ದರು ಎಂಬುದು ಗೊತ್ತಿಲ್ಲ. ಬಿ.ವೈ. ವಿಜಯೇಂದ್ರ ಅಪ್ಪ ಯಡಿಯೂರಪ್ಪ, ಬಿಜೆಪಿಗೆ ಯಡಿಯೂರಪ್ಪ ಅಪ್ಪ ಇದ್ದ ಹಾಗೆ. ನಾನೇನೂ ವಿಜಯೇಂದ್ರ, ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿಲ್ಲ. ನನಗೂ ಅವರಿಗೂ ಮಾತು ನಿಂತು ಎರಡೂವರೆ ವರ್ಷಗಳು ಕಳೆದಿದೆ. ಆದರೆ, ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡಬೇಕಿತ್ತು ಎಂದರು.