ಹೋಶಿಯಾರ್‌ಪುರ(ಪಂಜಾಬ್) : ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದ ನಂತರ ಪಂಜಾಬ್ ಪೊಲೀಸರು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಪೊಲೀಸರ ಒಂದು ಕ್ರಮ ಈಗ ಟೀಕೆ, ವಿವಾದಕ್ಕೆ ಕಾರಣವಾಗಿದೆ. ಡ್ರಗ್ಸ್ ಸಾಗಣೆ ಆರೋಪದ ಮೇಲೆ 13 ಮಂದಿ ಮೇಲೆ ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಇದರಲ್ಲಿ ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಯುವಕನ ಹೆಸರಿದೆ. ಇದು ಪೊಲೀಸರ ಕಾರ್ಯದ ಮೇಲೆಯೇ ಅನುಮಾನ ಮೂಡಿಸಿದೆ.
ಗರ್ಶಂಕರ್ ಪೊಲೀಸರು ಮೇ 20 ರಂದು ಡೊನೊವಾಲ್ ಖುರ್ದ್ ಗ್ರಾಮದಲ್ಲಿ ಮಾದಕವಸ್ತು ಸಾಗಣೆ ಆರೋಪದ ಮೇಲೆ 4 ಜನರನ್ನು ಬಂಧಿಸಿದ್ದಾರೆ. 6 ಮಹಿಳೆಯರು ಸೇರಿದಂತೆ 13 ಜನರ ವಿರುದ್ಧ ಪ್ರಕರಣವೂ ದಾಖಲಿಸಿದ್ದಾರೆ. ಆದರೆ, ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಗ್ರಾಮದ ಗುರುದೀಪ್ ಸಿಂಗ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.