ಟೆಕ್ಸಾಸ್ : ಅಮೆರಿಕದಲ್ಲಿ ಮತ್ತೊಮ್ಮೆ ಶೂಟರ್ ಗಳ ಅಟ್ಟಹಾಸ ಮುಂದುವರಿದಿದೆ. ಈ ಬಾರಿ ಟೆಕ್ಸಾಸ್ ನಲ್ಲಿ ಶೂಟರ್ ನಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ 18 ಅಮಾಯಕ ಮಕ್ಕಳು ದಾರುಣ ಸಾವು ಕಂಡಿದ್ದಾರೆ.
ಟೆಕ್ಸಾಸ್ ನ ಪ್ರಾಥಮಿಕ ಶಾಲೆಗೆ ನುಗ್ಗಿದ 18 ವರ್ಷದ ಶೂಟರ್ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರಿಂದ 18 ಮಕ್ಕಳು, ಮೂವರು ಶಿಕ್ಷಕರು ದಾರುಣ ಸಾವು ಕಂಡಿದ್ದಾರೆ. ಅದರ ಬೆನ್ನಲ್ಲಿಯೇ ಶೂಟರ್ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟೆಕ್ಸಾಸ್ ನ ಗವರ್ನರ್ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಹಿಂದೆಯೂ ಕೂಡ ಇಂಥದ್ದೇ ಘಟನೆಗಳು ಸಾಕಷ್ಟು ಬಾರಿ ನಡೆದಿವೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ 18ರ ಹರೆಯದ ಶೂಟರ್ ಇದ್ದಕ್ಕಿದ್ದಂತೆ ಶಾಲಾ ಆವರಣಕ್ಕೆ ಪ್ರವೇಶಿಸಿದ್ದ ಎನ್ನುವುದು ಸಿಸಿಟಿವಿ ಮೂಲಕ ಪತ್ತೆಯಾಗಿದೆ. ಶೂಟರ್ ಬಗ್ಗೆ ತಿಳಿದ ಬೆನ್ನಲ್ಲಿಯೇ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿಕೊಡಲಾಗಿತ್ತು. ಅಷ್ಟರಲ್ಲಿಯೇ ಶೂಟರ್ ತನ್ನ ಅಟ್ಟಹಾಸ ಮೆರೆದಿದ್ದಾನೆ. ಇದರ ಬೆನ್ನಲ್ಲಿಯೇ ಮಕ್ಕಳ ಪೋಷಕರು ಕ್ಯಾಂಪಸ್ ನತ್ತ ದೌಡಾಯಿಸಿದ್ದು, ಯಾವುದೇ ಕಾರಣಕ್ಕೂ ಪೋಷಕರನ್ನು ಕ್ಯಾಂಪಸ್ ನ ಒಳಗಡೆ ಹೋಗದಂತೆ ತಡಡೆಹಿಡಿಯಲಾಗಿದೆ.