ಉತ್ತರ ಪ್ರದೇಶ, ಕಾನ್ಪುರ್ : ಸಾವಿರ ಸುಳ್ಳುಹೇಳಿ ಮದುವೆಯಾಗು ಎಂಬ ಗಾದೆ ಮಾತಿದೆ. ಇಲ್ಲೊಬ್ಬ ವರ ಇದೇ ಮಾತನ್ನು ಗಂಭೀರವಾಗಿ ಪಾಲಿಸಲು ಹೋಗಿ ತನ್ನ ʼಬೋಳುತಲೆʼ ವಿಚಾರ ಮುಚ್ಚಿಟ್ಟಿದ್ದಕ್ಕಾಗಿ ನಡೆಯುತ್ತಿದ್ದ ಮದುವೆಯೇ ರದ್ದಾಗಿ ಕಂಗಾಲಾಗಿದ್ದಾನೆ.
ಇಂತಹದ್ದೊಂದು ವಿಚಿತ್ರ ಪ್ರಸಂಗ ಉತ್ತರ ಪ್ರದೇಶದ ಕಾನ್ಪುರದ ಇಟಾವಾ ಜಿಲ್ಲೆಯ ಭರ್ತನ ಪ್ರದೇಶದಲ್ಲಿ ನಡೆದಿದೆ. ಎಂಬ ವ್ಯಕ್ತಿ ತನ್ನ ಬೋಳುತಲೆಯ ಕಾರಣದಿಂದ ವಿವಾಹಕ್ಕೆ ವಧು ಸಿಗದೆ ಬೇಸತ್ತು ಹೋಗಿದ್ದ. ಇದೇ ಕಾರಣ ನೀಡಿ ಹುಡುಗಿಯರು ಅವರ ವಿವಾಹ ಪ್ರಸ್ತಾಪ ನಿರಾಕರಿಸುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಅಜಯ್ ಹೇಗಾದರೂ ಮಾಡಿ ಮದುವೆಯಾಗಲೇಬೇಕು ಎಂದು ನಿರ್ಧರಿಸಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ. ಅದರಂತೆ ಮುಂದಿನ ಬಾರಿ ವಧು ನೋಡಲು ಹೋಗುವಾಗ ತಲೆಗೆ ವಿಗ್ ಧರಿಸಿಹೋದ.
ವಿಗ್ ನಲ್ಲಿ ಸುರಸುಂದರಾಂಗನಾಗಿ ಕಾಣುತ್ತಿದ್ದ ಅಜಯ್ ರನ್ನು ಮೆಚ್ಚಿದ ಯುವತಿ ವಿವಾಹವಾಗಲು ಒಪ್ಪಿದಳು. ಅದರಂತೆ ಭರ್ತನ ಪ್ರದೇಶದ ವಿವಾಹ ಮಂಟಪದಲ್ಲಿ ಅವರ ವಿವಾಹವೂ ಆಯೋಜನೆಯಾಯ್ತು. ಇನ್ನೇನು ಮದುವೆಯಾಗುವ ಸಂಭ್ರಮದಲ್ಲಿ ವರ ಅಜಯ್ ವಿವಾಹದ ಶಾಸ್ತ್ರಗಳಲ್ಲಿ ತೊಡಗಿಕೊಂಡಿದ್ದ. ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದು ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಎನ್ನುವ ಸಮಯಕ್ಕೆ ಸರಿಯಾಗಿ, ವರನ ದುರಾದೃಷ್ಟ ನೋಡಿ ಆತ ಧರಿಸಿದ್ದ ಪೇಟದ ಸಮೇತ ವಿಗ್ ಜಾರಿ ಕೆಳಗೆ ಬಿದ್ದಿದೆ. ಅಲ್ಲಿಗೆ ವರನ ಅಸಲಿಯತ್ತು ಇಡೀ ಮಂಟಪಕ್ಕೆ ಬಟಾಬಯಲಾಗಿದೆ. ಬೋಳುತಲೆಯ ವರನನ್ನು ನೋಡುತ್ತಲೇ ವಧು ಪ್ರಜ್ಞೆ ತಪ್ಪಿ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾಳೆ. ಎಚ್ಚರವಾದ ಮೇಲೆ ಮದುವೆಗೆ ಒಲ್ಲೆ ಅಂದಿದ್ದಾಳೆ. ಕುಟುಂಬಸ್ಥರು ಮನವೊಲಿಸಿದರಾದರೂ ವಧು ಮದುವೆಗೆ ಬಿಲ್ ಕುಲ್ ಒಪ್ಪಲಾರೆ ಎಂದು ನಿರಾಕರಿಸಿದ್ದಾಳೆ.