Breaking News

ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್‌ ಮಾಡಿಸ್ತಾರ ನಮ್ಮ ಪ್ರಾಬ್ಲೇಂ ಯಾರಿಗೆ ಹೇಳೋಣ

Spread the love

ಹುಬ್ಬಳ್ಳಿ: ನಮ್ಮ ಹತ್ತಿರವೇ ರಕ್ತ ಪರೀಕ್ಷೆಗೆ ಹಣ ಕೇಳ್ತಾರ, ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್‌ ಮಾಡಿಸ್ತಾರ, ಔಷಧಿಗಳನ್ನು ಹೊರಗಡೆಯಿಂದ ತರಾಕ ಹೇಳ್ತಾರ, ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ…
ಧಾರವಾಡದ ಬಾಡ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸಂಬಂಧಿಕರು, ಕಿಮ್ಸ್‌ಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಎದುರು ಆಸ್ಪತ್ರೆ ಸಿಬ್ಬಂದಿಯ ವರ್ತನೆ ಕುರಿತು ಮಾಡಿದ ಆರೋಪಗಳಿವು.
‘ಒಡಹುಟ್ಟಿದವರು ಮತ್ತು ಸಂಬಂಧಿಕರನ್ನು ಕಳೆದುಕೊಂಡು ಈಗಾಗಲೇ ಸಂಕಟದಲ್ಲಿದ್ದೇವೆ. ಗಾಯಗೊಂಡವರನ್ನಾದರೂ ಆದಷ್ಟು ಬೇಗ ಗುಣಮು ಖರನ್ನಾಗಿಸಿಕೊಂಡು ಮನೆಗೆ ಕರೆದುಕೊಂಡು ಹೋಗೋಣ ಎಂದರೆ, ಇಲ್ಲಿಯ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ’ ಎಂದು ಗಾಯಾಳು ಆಕಾಂಕ್ಷಾ ಅವರ ಅಜ್ಜ ಗುರುನಾಥ ಅವರು ಅಳಲು ತೋಡಿಕೊಂಡರು.
‘ದಿನಕ್ಕೆ ಎರಡು ಬಾರಿ ಬ್ಯಾಂಡೇಜ್‌ ಮಾಡಬೇಕಾಗುತ್ತದೆ. ಇಲ್ಲಿಯ ಸಿಬ್ಬಂದಿ ನಮ್ಮಿಂದಲೇ ಅದನ್ನು ಮಾಡಿಸುತ್ತಾರೆ. ಗಾಯಕ್ಕೆ ಹೇಗೆ ಬಟ್ಟೆ ಸುತ್ತಬೇಕು ಎಂದು ನಮಗೆ ತಿಳಿದಿಲ್ಲ. ಮೂತ್ರ ವಿಸರ್ಜನೆಗೆ ಅಳವಡಿಸಿದ ಪೈಪ್‌ ಸಹ ನಾವೇ ತೆಗೆದುಹಾಕಬೇಕು ಎನ್ನುತ್ತಾರೆ’ ಎಂದು ಸಚಿವರ ಎದುರು ಆಸ್ಪತ್ರೆಯ ಅವ್ಯವಸ್ಥೆಗಳನ್ನು ಬಿಚ್ಚಿಟ್ಟರು.
ಆರೋಪಗಳ ಕುರಿತು ಅಲ್ಲಿಯೇ ಇದ್ದ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಲ್ಲಿ ಸಚಿವರು ವಿಚಾರಿಸಿದಾಗ, ‘ಆ ಕುರಿತು ಇದುವರೆಗೆ ಯಾವುದೇ ದೂರು ಬಂದಿಲ್ಲ’ ಎಂದು ಜಾರಿಕೊಂಡರು. ಅದಕ್ಕೆ ಗರಂ ಆದ ಸಚಿವ ಪ್ರಲ್ಹಾದ್ ಜೋಶಿ, ‘ದಾರುಣ ಸಂದರ್ಭದಲ್ಲಿ ಆಸ್ಪತ್ರೆಯವರು ಮಾನವೀಯತೆ ಮರೆಯಬಾರದು. ನಿಮ್ಮ ಜವಾಬ್ದಾರಿ ಅರಿತು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಅವರಿಂದ ಯಾವುದೇ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ’ ಎಂದು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ‘ಅಪಘಾತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಕಿಮ್ಸ್‌ನಲ್ಲಿ ಎಂಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ‌‌‌ಐಸಿಯುದಲ್ಲಿ ಇದ್ದಾರೆ. ತಾಯಿಯ ತೊಡೆ ಮೇಲೆಯೇ ಕುಳಿತ ಮಗುವೊಂದು ಅವಳ ಎದುರಿಗೇ ಮೃತಪಟ್ಟಿರುವುದು ಮನಕಲಕುವಂತಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು’ ಎಂದರು.


Spread the love

About Karnataka Junction

[ajax_load_more]

Check Also

*ಎಸ್.ಬಿ.ಐ ಹುದ್ದೆಗಳ ನೇಮಕಾತಿ; ಜ.6 ರಿಂದ ಪೂರ್ವಭಾವಿ ಪರೀಕ್ಷೆ ಸಿದ್ಧತೆಗೆ ಉಚಿತ ತರಬೇತಿ*

Spread the loveಹುಬ್ಬಳ್ಳಿ : ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ …

Leave a Reply

error: Content is protected !!